ಮಂಗಳೂರು/ಪುತ್ತೂರು: ನಗರದ ಪಾಂಡೇಶ್ವರದ ಫೋರಂ ಮಾಲ್ ನ ಶೆರ್ಲಾಕ್ ಪಬ್‌ಗೆ ಬಂದಿದ್ದ ವಿಟ್ಲ ಮೂಲದ ಯುವತಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ನೆಹರೂನಗರದ ವಿನಯ್ (33) ಮಹೇಶ್ (28), ಪಡ್ನೂರಿನ ಪ್ರಿತೇಶ್ (34) ಮತ್ತು ನಿತೇಶ್ (33) ಎಂದು ಗುರುತಿಸಲಾಗಿದೆ.
ಪಾಂಡೇಶ್ವರದ ಫೋರಂ ಮಾಲ್ ನಲ್ಲಿರುವ ಶೆರ್ಲಾಕ್ ಪಬ್‌ಗೆ ಯುವತಿ ತನ್ನ ಗೆಳತಿ ಜತೆ ತೆರಳಿದ್ದರು. ಅಲ್ಲಿ ಪುತ್ತೂರಿನ ಯುವಕರ ತಂಡ ಪಾರ್ಟಿಯಲ್ಲಿ ತೊಡಗಿತ್ತು. ನಂತರ ಯುವತಿಗೆ ಕಿರುಕುಳ ನೀಡಿದ ಯುವಕರು ಯುವತಿಯ ಜತೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಯುವತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಒರ್ವ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಮೂವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.