ಜೋಕಟ್ಟೆಯಲ್ಲಿ ಬಾಲಕಿಯ ಮೃತದೇಹ ಪತ್ತೆ : ಕೊಲೆ ಶಂಕೆ

ಮಂಗಳೂರು : ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ತನ್ನ ಡೊಡ್ಡಪ್ಪನೊಂದಿಗೆ ವಾಸವಿದ್ದ 13 ವರ್ಷದ ಬಾಲಕಿಯ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎನ್ನಲಾದ ಘಟನೆ ಆ.6 ರಂದು ಜೋಕಟ್ಟೆಯಲ್ಲಿ ನಡೆದಿದೆ. ಕೊಲೆಯಾದ ಬಾಲಕಿ ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು, ಸದ್ಯ ಜೋಕಟ್ಟೆಯಲ್ಲಿ ವಾಸವಾಗಿರುವ ಹನುಮಂತ ಎಂಬವರ ತಮ್ಮನ ಮಗಳು ಎಂದು ತಿಳಿದು ಬಂದಿದೆ.

ಹನುಮಂತು ಮತ್ತು ಕುಟುಂಬ ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಮೃತ ಬಾಲಕಿಯು ನಾಲ್ಕು ದಿನಗಳ ಹಿಂದೆ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜೋಕಟ್ಟೆಯಲ್ಲಿನ ತನ್ನ ದೊಡ್ಡಪ್ಪ ಹನುಮಂತು ಮನೆಗೆ ಬಂದು ನೆಲೆಸಿದ್ದಳು.

ಮಂಗಳವಾರ ಮನೆಯಲ್ಲಿದ್ದ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ್ದು, ಬಾಲಕಿ ಮಾತ್ರ ಇದ್ದಳು. ಈ ವೇಳೆ ಊರಿನಿಂದ ಬಾಲಕಿಯ ತಾಯಿ ನೆರೆ ಮನೆಗೆ ಕರೆ ಮಾಡಿ ಬಾಲಕಿಗೆ ಫೋನ್ ಕೊಡುವಂತೆ ಹೇಳಿದ್ದಳು. ಬಾಲಕಿಗೆ ಫೋನ್ ಕೊಡಲು ನೆರೆಮನೆಯವರು ತೆರಳಿದ ವೇಳೆ ಬಟ್ಟೆಯಿಂದ ಕತ್ತು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಬಾಲಕಿಯ ಕೊಲೆಗೆ ಸಂಬಂಧಿಸಿ ಬೆಳಗಾವಿ ಮೂಲದವರೇ ಆಗಿರುವ ಸದ್ಯ ಜೋಕಟ್ಟೆಯಲ್ಲಿ ವಾಸವಿರುವ ಫಕೀರಪ್ಪ (50) ಮತ್ತು ಶಾಂತಪ್ಪ ಎಂಬವರನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೊಡ್ಡಪ್ಪ ಮತ್ತು ಫಕೀರಪ್ಪನ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ವೇಳೆ ಅನುಮಾನಗೊಂಡು ಫಕೀರಪ್ಪ ಹಾಗು ಶಾಂತಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಉಪಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಫಾರೆನ್ಸಿಕ್ ವಿಭಾಗದ ಸಿಬ್ಬಂದಿ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here