ಮಂಗಳೂರು (ಮೈಸೂರು): ಬಿಜೆಪಿ–ಜೆಡಿಎಸ್‌ನ ‘ಮೈಸೂರು ಚಲೋ’ ಪಾದಯಾತ್ರೆಯು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಮುಖ್ಯಮಂತ್ರಿ ತವರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ರಣಕಹಳೆಗೆ ವೇದಿಕೆ ಸಜ್ಜಾಗಿದೆ.
ಶುಕ್ರವಾರ ಕಾಂಗ್ರೆಸ್ ಸರ್ಕಾರ ಶಕ್ತಿ ಪ್ರದರ್ಶನ ನಡೆಸಿದ್ದು, ಇಲ್ಲಿನ ಮಹಾರಾಜ ಕಾಲೇಜು ಮೈದಾನದ ವೇದಿಕೆಯಲ್ಲೇ ಇಂದು ಬಿಜೆಪಿ–ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾವೇಶವೂ ನಡೆಯಲಿದೆ. ಮುಖ್ಯಮಂತ್ರಿ, ಸಚಿವರ ವಾಗ್ದಾಳಿಗೆ ಅಲ್ಲಿಯೇ ಉತ್ತರ ನೀಡಲು ವಿರೋಧ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಮೂಲಕ ಹೋರಾಟ ಸಮಾಪ್ತಿಗೊಳಿಸುವ ಉತ್ಸಾಹದಲ್ಲಿದ್ದಾರೆ. ಇದು ಮತ್ತೊಂದು ಸುತ್ತಿನ ಮಾತಿನ ಸಮರಕ್ಕೂ ಸಾಕ್ಷಿಯಾಗಲಿದೆ.
ಆ.3ರಂದು ಬೆಂಗಳೂರಿನ ಕೆಂಗೇರಿ ಸಮೀಪ ಆರಂಭಗೊಂಡ ಪಾದಯಾತ್ರೆಯು ಏಳು ದಿನಗಳ ಕಾಲ ನಡೆದಿದೆ. 140 ಕಿ.ಮೀ.ಗೂ ಹೆಚ್ಚು ದೂರ ಹೆಜ್ಜೆ ಹಾಕಿರುವ ನಾಯಕರು, ದಣಿವು ಮರೆತು ಸರ್ಕಾರವನ್ನು ಹಣಿಯುವ ತಂತ್ರ ರೂಪಿಸುತ್ತಿದ್ದಾರೆ. ಆರಂಭದಲ್ಲಿ, ಪಾದಯಾತ್ರೆಯೂ ತಮಗೂ ಸಂಬಂಧವೇ ಇಲ್ಲ ಎಂದು ಮುನಿಸು ತೋರಿದ್ದ ಜೆಡಿಎಸ್ ನಾಯಕರು ನಂತರ, ಬಿಜೆಪಿ ಹೈಕಮಾಂಡ್‌ಗೆ ತಲೆಬಾಗಿ ಹೆಜ್ಜೆ ಇಟ್ಟಿದ್ದಾರೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮುನಿಸು ಮುಂದುವರಿದಿದೆ.
ಶ್ರಾವಣ ಮಾಸದಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರವೂ ಬರಲಿ ಎಂಬ ಆಶಯದೊಂದಿಗೆ ಹೋರಾಟ ಸಮಾರೋಪಗೊಳ್ಳುತ್ತಿದೆ. ತಿಂಗಳುಗಳ ಹಿಂದಷ್ಟೇ ಲೋಕಸಭೆ ಚುನಾವಣೆ ಕಂಡಿರುವ ಜನರಿಗೆ ವಿಪಕ್ಷಗಳ ಈ ಯಾತ್ರೆಯು ಮತ್ತೆ ಚುನಾವಣೆಯನ್ನು ನೆನಪಿಗೆ ತಂದಿದೆ. ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ತೋರಿರುವ ಪಾದಯಾತ್ರೆಯ ಉದ್ದಕ್ಕೂ ಬರೀ ಸರ್ಕಾರದ ವಿರುದ್ಧದ ವಾಗ್ದಾಳಿಯೇ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವೇ ಇಡೀ ಯಾತ್ರೆಯನ್ನು ಆವರಿಸಿದೆ.
ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವರ್ಚಸ್ಸು ವೃದ್ಧಿಗೆ ದಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೂಲಕ ಜೆಡಿಎಸ್ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಿದ್ದರೆ, ಬಿಜೆಪಿಯು ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.
ಶನಿವಾರದ ಸಮಾವೇಶದಲ್ಲಿ ‘ಮೈತ್ರಿ‘ ನಾಯಕರ ದಂಡೇ ಭಾಗವಹಿಸಲಿದೆ. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮೈಸೂರಿನ ನೆರೆ–ಹೊರೆಯ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ವಿಪಕ್ಷಗಳ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತುಗಳಿಗೆ ಸಮಾವೇಶದಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಸರ್ಕಾರದ ಬಗ್ಗೆ ಇರುವ ಜನಾಕ್ರೋಶ ಏನೆಂಬುದು ಅಲ್ಲಿ ತಿಳಿಯಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.