ಮಂಗಳೂರು (ವಿಜಯನಗರ): ತುಂಗಭದ್ರಾ ಡ್ಯಾಮ್‌ನ 19ನೇ ಕ್ರಸ್ಟ್ ಗೇಟ್ ಮಧ್ಯರಾತ್ರಿ ಮುರಿದ ಪರಿಣಾಮ ಭಾರೀ ಪ್ರಮಾಣದ ನೀರು ನದಿ ಸೇರುತ್ತಿದೆ.
ಡ್ಯಾಮ್‌ನ 70 ವರ್ಷದ ಇತಿಹಾಸದಲ್ಲಿ ಗೇಟ್ ಮುರಿದು ಆತಂಕ ಸೃಷ್ಟಿಯಾಗಿರುವುದು ಇದು ಎರಡನೇ ಬಾರಿ. 2019ರಲ್ಲೂ ಇಂತಹದೇ ದುರ್ಘಟನೆ ಸಂಭವಿಸಿ, ಮುನಿರಾಬಾದ್ ಗ್ರಾಮಕ್ಕೂ ನೀರು ನುಗ್ಗಿತ್ತು. ಈಗಲೂ ಇಂತಹುದೇ ಸ್ಥಿತಿ ನಿರ್ಮಾಣವಾಗಿದ್ದು, ಆತಂಕ ಹೆಚ್ಚಿಸಿದೆ.
ಮುರಿದ 19ನೇ ಕ್ರಸ್ಟ್ ಗೇಟ್ ಮೂಲಕ ಸುಮಾರು 35 ಸಾವಿರ ಕ್ಯುಸೆಕ್‌ನಷ್ಟು ನೀರು ನದಿಗೆ ಹರಿಯುತ್ತಿರುವುದರಿಂದ ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಜಲಾಶಯ ಭರ್ತಿಯಾಗಿರುವುದರಿಂದ ಈಗ ಗೇಟ್ ದುರಸ್ತಿ ಕಷ್ಟಕರವಾಗಿದೆಯಾದರೂ, ಬೆಂಗಳೂರಿನಿಂದ ಈಗಾಗಲೇ ತಜ್ಞರ ತಂಡ ಸ್ಥಳಕ್ಕೆ ತಲುಪಿದೆ.
ಕ್ರಸ್ಟ್ ಗೇಟ್ 19ರ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಅಣೆಕಟ್ಟೆಯ ಎಲ್ಲ ಗೇಟ್‌ಗಳಿಂದ ಸುಮಾರು 28 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾದುದರಿಂದ ಶನಿವಾರವಷ್ಟೇ ಹೊರಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿತ್ತು.
ಗೇಟ್ ದುರಸ್ಥಿಗೆ 50ರಿಂದ 60 ಟಿಎಂಸಿ ನೀರು ಹೊರಬಿಡ ಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ದಿನಕ್ಕೆ 2 ಲಕ್ಷ ಕ್ಯೂಸೆಕ್ಸ್ ನೀರು ತುಂಗಭದ್ರ ನದಿಗೆ ಹರಿಸಬೇಕಾಗಿದೆ. ಆದರೆ ನದಿ ಒಳ ಹರಿವು ಕಡಿಮೆಯಾಗಿರುವುದರಿಂದ ಮತ್ತೆ ಜಲಾಶಯ ಭರ್ತಿಯಾಗುತ್ತದೋ ಇಲ್ಲವೋ ಎನ್ನುವ ಆತಂಕ ಸೃಷ್ಟಿಯಾಗಿದೆ.