ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿಎಡ್ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್‌ ತೀರ್ಪು

ಮಂಗಳೂರು/ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿಎಡ್ ಅರ್ಹತೆ ಹೊಂದಿರಬೇಕು ಎಂಬ ಕೇಂದ್ರ ಸರ್ಕಾರ ಕೈಗೊಂಡ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕೇಂದ್ರ ಸರ್ಕಾರದ ನಿರ್ಧಾರ ಸಂಪೂರ್ಣ ಸ್ವೇಚ್ಛೆಯಿಂದ ಕೂಡಿದೆ. ಮತ್ತು ತಾರ್ಕಿಕತೆಯನ್ನು ಮೀರಿದೆ. ಹಾಗಾಗಿ, ಬಿಎಡ್‌ ಪದವಿ ಶಾಲಾ ಶಿಕ್ಷಕರಾಗಲು ಕಡ್ಡಾಯ ಅರ್ಹತೆಯಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.ಸುಪ್ರೀಂ ಕೋರ್ಟ್‌ನ ನ್ಯಾ. ಅನಿರುದ್ಧ ಬೋಸ್ ಹಾಗೂ ನ್ಯಾ. ಸುಧಾಂಶು ಧುಲಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಮಕ್ಕಳಿಗೆ ಉಚಿತ, ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಇದಕ್ಕಾಗಿ ರೂಪಿಸಲಾದ ಶಿಕ್ಷಣದ ಹಕ್ಕು ಕಾಯ್ದೆಗೂ ಈ ನಿರ್ಧಾರಕ್ಕೂ ಸಂಬಂಧ ಇಲ್ಲ. ಬಿಎಡ್ ಅನ್ನು ಅರ್ಹತೆಯಾಗಿ ನಿಗದಿ ಮಾಡಬೇಕು ಎಂದು ಎನ್‌ ಸಿ ಟಿ ಇ 2018ರ ಜೂನ್‌ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ ಈ ಮೂಲಕ ರದ್ದು ಮಾಡಿದೆ.

ಪ್ರಾಥಮಿಕ ಹಂತದ ತರಗತಿಗಳಲ್ಲಿ ಮಕ್ಕಳಿಗೆ ಕಲಿಸಲು ಬಿಎಡ್ ಭಿನ್ನವಾದ ಅರ್ಹತೆ ಅಗತ್ಯವಿದೆ. ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಬಿಎಡ್ ಅರ್ಹತೆ ಇರುವವರು ಆಯ್ಕೆ ಆಗಿದ್ದರೆ ಎರಡು ವರ್ಷಗಳ ಒಳಗೆ ಬೋಧನೆಗೆ ಸಂಬಂಧಿಸಿದ ಕೋರ್ಸ್ ಒಂದನ್ನು ಪೂರ್ಣಗೊಳಿಸಬೇಕು ಎಂದು ಬೋಧನಾ ಶಿಕ್ಷಣ ರಾಷ್ಟ್ರೀಯ ಪರಿಷತ್ ಹೇಳಿರುವುದು ಪುಷ್ಟೀಕರಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲು ಪ್ರಾಥಮಿಕ ಶಿಕ್ಷಣ ಡಿಪ್ಲೊಮಾ ಅರ್ಹತೆಯೇ ಹೊರತು ಬಿಎಡ್ ಅಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಹಲವು ಬಾರಿ ಹೇಳಿದೆ. ಈ ಅಂಶವನ್ನು ಪ್ರಸಕ್ತ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

LEAVE A REPLY

Please enter your comment!
Please enter your name here