ಮಂಗಳೂರು (ನವದೆಹಲಿ): 78ನೇ ಸ್ವಾತಂತ್ರ್ಯೋತ್ಸ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
40 ಕೋಟಿ ಜನರು ಗುಲಾಮಗಿರಿಯ ಸಂಕೋಲೆಯನ್ನು ಹೊಡೆದೋಡಿಸಿದ್ದಾರೆ. 140 ಕೋಟಿ ಇರುವ ನನ್ನ ದೇಶದ ನಾಗರಿಕರು, ನನ್ನ ಕುಟುಂಬದ ಸದಸ್ಯರು ದೃಢಸಂಕಲ್ಪದಿಂದ ಮುನ್ನಡೆದರೆ ಸಮೃದ್ಧಿಯನ್ನು ಸಾಧಿಸಬಹುದು. ಒಂದೇ ದಿಕ್ಕಿನಲ್ಲಿ, ಹೆಜ್ಜೆಹೆಜ್ಜೆಗೂ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದರೆ ಎಷ್ಟೇ ಸವಾಲುಗಳಿದ್ದರೂ ಗುರಿ ಮುಟ್ಟಬಹುದು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು ಇಂತಿದೆ:
- ಇಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ‘ಸ್ವಾತಂತ್ರ್ಯ ಪ್ರೇಮಿಗಳಿಗೆ’ ಗೌರವ ಸಲ್ಲಿಸುವ ದಿನವಾಗಿದೆ.
- 40 ಕೋಟಿ ಜನ ದೇಶವನ್ನು ಸ್ವತಂತ್ರವನ್ನಾಗಿ ಮಾಡಿದ್ದಾರೆ, ಇಂದು 140 ಕೋಟಿ ಜನರಿರುವ ನಾವು ದೇಶದ ಗುರಿಯನ್ನು ಸುಲಭವಾಗಿ ಸಾಧಿಸಬಹುದು. ನಾವು ಸಂಕಲ್ಪ ಮಾಡಿದರೆ 2047ರವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಬಹುದು.
- 40 ಕೋಟಿ ಜನರು ಗುಲಾಮಗಿರಿಯ ಸಂಕೋಲೆಯನ್ನು ಮುರಿದಿದ್ದಾರೆ.
- ಪ್ರಕೃತಿ ವಿಕೋಪದಲ್ಲಿ ಹಲವು ಜನರು ತಮ್ಮ ಕುಟುಂಬಗಳನ್ನು ಕಳೆದುಕೊಂಡರು, ದೇಶವು ಸಂತ್ರಸ್ತರೊಂದಿಗೆ ಇದೆ.
- 15 ಕೋಟಿ ಕುಟುಂಬಗಳು ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ನ ಪ್ರಯೋಜನ ಪಡೆದಿವೆ.
- ಉಗ್ರರು ದಾಳಿ ನಡೆಸಿ ಪರಾರಿಯಾಗುತ್ತಿದ್ದ ದೇಶವಿದು. ದೇಶದ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ, ಸೇನೆ ವೈಮಾನಿಕ ದಾಳಿ ನಡೆಸಿದಾಗ ಯುವಕರ ಎದೆಯಲ್ಲಿ ಹೆಮ್ಮೆ ಮೂಡುತ್ತದೆ. ಇವು ದೇಶವಾಸಿಗಳ ಹೃದಯದಲ್ಲಿ ಹೆಮ್ಮೆಯನ್ನು ತುಂಬುವ ಸಂಗತಿಗಳು.
- ರಾಷ್ಟ್ರೀಯ ಹಿತಾಸಕ್ತಿಯನ್ನು ಸರ್ವೋಚ್ಛ ಎಂದು ಪರಿಗಣಿಸಿ ಸುಧಾರಣೆಗಳನ್ನು ಮಾಡಿದ್ದೇವೆ. ನನ್ನ ಭಾರತ ಶ್ರೇಷ್ಠವಾಗಬೇಕು ಎಂಬ ಈ ಸಂಕಲ್ಪದೊಂದಿಗೆ ಹೆಜ್ಜೆ ಇಡುತ್ತೇವೆ.
- ಸರ್ಕಾರವು ನಲ್ಲಿ ನೀರು ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ಮನೆ-ಮನೆಗಳಿಗೆ ತಲುಪಿಸುತ್ತಿದೆ. ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿದೆ.
- ಬಾಹ್ಯಾಕಾಶ ಕ್ಷೇತ್ರವು ನಮ್ಮೊಂದಿಗೆ ಸಂಬಂಧ ಹೊಂದಿದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ನೂರಾರು ಸ್ಟಾರ್ಟಪ್ಗಳು ಬಂದಿವೆ. ಬಾಹ್ಯಾಕಾಶ ಕ್ಷೇತ್ರವು ಭಾರತವನ್ನು ಬಲಪಡಿಸುವ ಪ್ರಮುಖ ಭಾಗವಾಗಿದೆ. ಇಂದು ಖಾಸಗಿ ಉಪಗ್ರಹಗಳು ಮತ್ತು ರಾಕೆಟ್ಗಳನ್ನು ಉಡಾವಣೆ ಮಾಡಲಾಗುತ್ತಿದೆ.
- ಬ್ರಿಟಿಷರ ಕಾಲದ 1500ಕ್ಕೂ ಹೆಚ್ಚು ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಸಣ್ಣಪುಟ್ಟ ತಪ್ಪುಗಳಿಗೂ ಜೈಲಿಗೆ ಹಾಕುವ ಕಾನೂನನ್ನು ರದ್ದುಪಡಿಸುವ ಮೂಲಕ ಕ್ರಿಮಿನಲ್ ಕಾನೂನನ್ನು ಬದಲಾಯಿಸಲಾಗಿದೆ.
- ನಮ್ಮ ಗಮನ ಪ್ರತಿಯೊಂದು ಕ್ಷೇತ್ರವನ್ನು ವೇಗಗೊಳಿಸುವುದಾಗಿದೆ. ದೇಶದ ಜನರು ನಮಗೆ ಮೂರನೇ ಬಾರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದರು, ನಾನು ಗೌರವ ಸಲ್ಲಿಸುತ್ತೇನೆ.
- ಹೊಸ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ನೀಡುತ್ತದೆ. ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ. ಈ ಮೂಲಕ ಯುವಕರು ಓದಲು ವಿದೇಶಕ್ಕೆ ಹೋಗುವ ಅಗತ್ಯವಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಒತ್ತು ನೀಡಲಾಗಿದೆ. ಭಾಷೆಯಿಂದಾಗಿ ನಮ್ಮ ದೇಶದ ಪ್ರತಿಭೆಗೆ ಅಡ್ಡಿಯಾಗಬಾರದು.
- ಚಂದ್ರಯಾನ ಮಿಷನ್ ನಂತರ ವಿಜ್ಞಾನ-ತಂತ್ರಜ್ಞಾನದಲ್ಲಿ ಆಸಕ್ತಿ ಹೆಚ್ಚಿದೆ. ಮುಂದಿನ ಐದು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 75 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುವುದು.
- ವಾಯುಪಡೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರ ಶಕ್ತಿ ಹೆಚ್ಚಾಗಿದೆ. ಸೇನೆ, ನೌಕಾಪಡೆ, ವಾಯುಪಡೆ ಮತ್ತು ಬಾಹ್ಯಾಕಾಶ ವಲಯದಲ್ಲಿ ಮಹಿಳೆಯರ ಶಕ್ತಿ ಎದ್ದು ಕಾಣುತ್ತಿದೆ.