ಕಾಳಿ ನದಿಯಿಂದ ಲಾರಿ ಹೊರಕ್ಕೆ – ಈಶ್ವರ್‌ ಮಲ್ಪೆ ತಂಡದ ಸಹಕಾರದೊಂದಿಗೆ ಯಶಸ್ವಿ ಕಾರ್ಯಾಚರಣೆ

ಮಂಗಳೂರು(ಕಾರವಾರ): ಕಾರವಾರದ ಕಾಳಿ ನದಿಯ ಹಳೆಯ ಸೇತುವೆ ಕುಸಿದ ಪರಿಣಾಮ ನದಿ ಸೇರಿದ್ದ ತಮಿಳು ನಾಡಿನ ಮೂಲದ ಲಾರಿಯನ್ನು ಸತತ ಏಳು ತಾಸುಗಳ ಕಾರ್ಯಾಚರಣೆಯಲ್ಲಿ ಮೇಲಕ್ಕೆತ್ತಲಾಗಿದೆ. ಕಾಳಿ ನದಿಯ ಅಳ್ವೇವಾಡ ದಂಡೆಗೆ ಲಾರಿಯನ್ನು ಎಳೆದು ತರಲಾಗಿದೆ.

ಆ.15ರಂದು ಬೆಳಿಗ್ಗೆಯಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದ ಐ.ಆರ್. ಬಿ. ಕಂಪನಿ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿದ್ದು, ಎಸ್ ಡಿ ಆರ್ ಎಫ್, ಕರಾವಳಿ ಕಾವಲು ಪಡೆ ಲಾರಿ ಹೊರ ತೆಗೆಯುವಲ್ಲಿ ಶ್ರಮ ವಹಿಸಿತ್ತು.ನಿರಂತರ ಏಳು ಗಂಟೆಗಳ ಕಾರ್ಯಾಚರಣೆ ಮಾಡಿ ಕಾಳಿ ನದಿ ದಡಕ್ಕೆ ಲಾರಿ ಎಳೆದು ತರಲಾಗಿದೆ. ದಡಕ್ಕೆ ಬಂದ ಲಾರಿಯನ್ನು ಕೆಲ ನಿಮಿಷದಲ್ಲಿ ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು. ಇದಕ್ಕೂ ಮುನ್ನ ಈಶ್ವರ ಮಲ್ಪೆ ಹಾಗೂ ಅವರ ತಂಡ ಸ್ಕೂಬಾ ಡೈವ್ ಮಾಡಿ ಮೂರು ರೋಪ್ ಗಳನ್ನು ಲಾರಿಗೆ ಕಟ್ಟಿ ಬಂದಿತ್ತು‌. ಮೂರು ಟೋಯಿಂಗ್ ವಾಹನಗಳ ಮೂಲಕ ನಿಧಾನಕ್ಕೆ ಲಾರಿಯನ್ನು ದಡದತ್ತ ಎಳೆದು ತರಲಾಯಿತು.

ಲಾರಿಗೆ ನದಿಯ ಕಲ್ಲು ಅಡ್ಡ ಬಂದ ಕಾರಣ‌ ಕಾರ್ಯಾಚರಣೆಯಲ್ಲಿ ವಿಳಂಬವಾಗಿದೆ. ಕಾರ್ಯಾಚರಣೆ ಸ್ಥಳಕ್ಕೆ ಸಚಿವ ಮಂಕಾಳು ವೈದ್ಯ, ಜಿಲ್ಲಾಧಿಕಾರಿ,ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ನೀಡಿ, ಕಾರ್ಯಾಚರಣೆ ನಡೆಸುತ್ತಿದ್ದವರಿಗೆ ಧೈರ್ಯ ತುಂಬಿದರು. ಲಾರಿ ಮಾಲಕ ಸೇಂಥಿಲ್  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here