ಮಂಗಳೂರು: ಸ್ಟೇಟ್‌ಬ್ಯಾಂಕ್‌ನ ಬೀದಿಬದಿ ವ್ಯಾಪಾರಿಗಳ ವಲಯಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್
ಸುಧೀರ್ ಶೆಟ್ಟಿ ಕಣ್ಣೂರು ಅಧಿಕಾರಿಗಳ ಜೊತೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಇಂದಿನಿಂದಿಂದಲೇ ವಲಯದ ಬಾಕಿ ಉಳಿದ ಕಾಮಗಾರಿಗಳನ್ನು ಆರಂಭಿಸಲಾಗುವುದು. ಈಗಾಗಲೇ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಪಾಲಿಕೆಯ ನಿಯಮಾವಳಿಗಳಿಗೆ ವ್ಯಾಪಾರಿಗಳು ಸ್ಪಂದಿಸುತ್ತಿದ್ದು, 18 ನಿಯಮಾವಳಿಗಳನ್ನು ಪಾಲಿಸಿದ ವ್ಯಾಪಾರಿಗಳಿಗೆ ವಲಯಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಸಕಲ ವ್ಯವಸ್ಥೆಗಳೊಂದಿಗೆ ಮುಂದಿನ ಒಂದೂವರೆ ತಿಂಗಳೊಳಗೆ ವ್ಯಾಪಾರಿಗಳಿಗೆ ಹಂಚಲಾಗುವುದು. ಸ್ಟೇಟ್‌ಬ್ಯಾಂಕ್ ಬಳಿ ಮೊದಲ ಹಂತದಲ್ಲಿ 123 ಮಂದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರಸ್ತುತ ನಿರ್ಮಾಣವಾಗಿರುವ ಜಾಗದಲ್ಲಿ 93 ಮಂದಿ ವ್ಯಾಪಾರಸ್ಥರಿಗೆ ಹಾಗೂ ತೆರವುಗೊಳ್ಳುವ ಮಾಂಸದ ಅಂಗಡಿಗಳಿರುವ ಜಾಗದಲ್ಲಿ 30 ಮಂದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ವ್ಯವಸ್ಥೆಯೊಂದಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಆ.31ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಚಾರ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆಯ ವಲಯ ಆಯುಕ್ತೆ ರೇಖಾ ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಸ್ತಾಫ, ಕೋಶಾಧಿಕಾರಿ ಮಹಮ್ಮದ್ ಆಶಿಫ್ ಸೇರಿದಂತೆ ವ್ಯಾಪಾರಿಗಳು ಉಪಸ್ಥಿತರಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ