ಮಂಗಳೂರು: ಕಾಲುಜಾರಿ ನೇತ್ರಾವತಿ ನದಿಗೆ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ಮಾ.26ರಂದು ನಡೆದಿದೆ.
ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವಕ್ಕೆ ಪ್ರಕಾಶ್ ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿದ್ದರು. ಸುಮಾರು 20 ರಷ್ಟು ನೆಂಟರು, ಸ್ನೇಹಿತರೊಂದಿಗೆ ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ನದಿ ನೀರಿಗೆ ಅಡಿಕೆ ಮರವನ್ನು ಅಡ್ಡವಾಗಿ ಹಾಕಿದ್ದು, ಅದರಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಕಾಲುಜಾರಿ ಬಿದ್ದು ಪ್ರಕಾಶ್, ನದಿ ನೀರಿನ ಹೂಳಿನಲ್ಲಿ ಹೂತುಹೋಗಿದ್ದರು. ಈಜಿನಲ್ಲಿ ಪರಿಣತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೇ, ನದಿ ನೀರಿನಲ್ಲಿ ಪ್ರಕಾಶ್ ಮುಳುಗಿದ್ದಾರೆ.
ಸ್ಥಳೀಯ ಈಜುಗಾರರು ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿ ಸಾಧ್ಯವಾಗದೇ ಇದ್ದಾಗ, ಉತ್ತರ ಪ್ರದೇಶ ಮೂಲದ ಮರಳು ತೆಗೆಯುವ ಕಾರ್ಮಿಕರು ಶೋಧ ನಡೆಸಿ ಮೇಲಕ್ಕೆತ್ತಿ ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಅವರು ಮೃತಪಟ್ಟಿದ್ದಾರೆ. ಬೈಕಂಪಾಡಿಯ ಎಂ.ಸಿ.ಎಫ್ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್, ಉದ್ಯೋಗದ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಗತಿ ಪರ ಕೃಷಿಕರೂ ಆಗಿದ್ದರು. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ