ಮಂಗಳೂರು: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನ ಟೋಲ್ ದರ ಹೆಚ್ಚಳ ಮಾಡಿದ್ದ ಆದೇಶವನ್ನು ವಾಪಾಸ್ ಪಡೆದಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಎ.1ರಿಂದ ಹೆದ್ದಾರಿ ಟೋಲ್ ದರವನ್ನು ಶೇ. 22 ರಷ್ಟು ಹೆಚ್ಚಳ ಮಾಡಿ ಪ್ರಾಧಿಕಾರವು ಆದೇಶ ಹೊರಡಿಸಿತ್ತು.
ಮಾ. 14ರಿಂದ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭವಾಗಿದ್ದು, 15 ದಿನದಲ್ಲೇ ಟೋಲ್ ದರ ಏರಿಸಿದ್ದರು. ಟೋಲ್ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತ್ತು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಬಹುದೆಂಬ ಕಾರಣಕ್ಕೆ ದರ ಪರಿಷ್ಕರಣೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಚುನಾವಣೆಯ ನಂತರ ಹೊಸ ದರ ಮತ್ತೆ ಜಾರಿಯಾಗಬಹುದು. ಈ ನಡುವೆ ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯ ಟೋಲ್ ಗಳಲ್ಲಿ ಎ.1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ನವಯುಗ ಉಡುಪಿ ಟೋಲ್ ವೇ ಪ್ರೈವೆಟ್ ಲಿಮಿಟೆಡ್ ಪ್ರಕಟನೆಯಲ್ಲಿ ತಿಳಿಸಿದೆ. ಆದರೆ ಈ ಟೋಲ್ ಗಳಲ್ಲಿ ದರ ಹೆಚ್ಚಳ ಪ್ರಕ್ರಿಯೆಯನ್ನು ವಾಪಸ್ ಪಡೆದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.