ಮಂಗಳೂರು(ಬೆಂಗಳೂರು): ಹೆತ್ತ ತಾಯಿಯನ್ನು ಹತ್ಯೆಗೈದ ಯುವತಿಯೊಬ್ಬಳು ಮೃತದೇಹವನ್ನು ಸೂಟ್ಕೇಸ್ನಲ್ಲಿ ಹಾಕಿಕೊಂಡು ನಗರದ ಮೈಕೋಲೇಔಟ್ ಪೊಲೀಸ್ ಠಾಣೆಗೆ ತಂದಿರುವ ಘಟನೆಯೊಂದು ಜೂ.13ರ ಬೆಳಗ್ಗೆ ನಡೆದಿದೆ. ಮೂಲತಃ ಕೊಲ್ಕತ್ತಾ ನಿವಾಸಿಯಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಬೀವಾ ಪಾಲ್ (70) ಹತ್ಯೆಗೊಳಗಾದ ಮಹಿಳೆಯಾಗಿದ್ದು, ಸೆನಾಲಿ ಸೇನ್(39) ಸ್ವಂತ ತಾಯಿಯನ್ನು ಕೊಂದ ಆರೋಪಿಯಾಗಿದ್ದಾಳೆ.
ನಗರದ ಬಿಳೇಕಹಳ್ಳಿಯ ಎನ್ಎಸ್ಆರ್ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಒಂದೇ ಫ್ಲ್ಯಾಟ್ನಲ್ಲಿ ಪುತ್ರಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ವಾಸವಿದ್ದರು. ನಿತ್ಯ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದು ಈ ಕೃತ್ಯವೆಸಗಿರುವುದಾಗಿ ಆಕೆ ಪೊಲೀಸರ ಬಳಿ ಹೇಳಿದ್ದಾಳೆ. ತಾಯಿಗೆ ಮೊದಲು ನಿದ್ರೆ ಮಾತ್ರೆ ನೀಡಿದ್ದು, ಹೊಟ್ಟೆ ನೋವು ಎಂದು ಕೂಗಲು ಆರಂಭಿಸಿದಾಗ ವೇಲ್ನಿಂದ ಕತ್ತನ್ನು ಹಿಸುಕಿ ಕೊಂದಿರುವುದಾಗಿ ಆಕೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.