ಮಂಗಳೂರು (ನವದೆಹಲಿ): ಮದ್ಯ ಕುಡಿದು ಮತ್ತಿನಲ್ಲಿ ವ್ಯಕ್ತಿಯೋರ್ವ ಅಪರಿಚಿತನಿಗೆ ತನ್ನ ಕಾರು ಮತ್ತು ನಗದನ್ನು ನೀಡಿ, ತನ್ನದೇ ಕಾರಿನಲ್ಲಿ ಡ್ರಾಪ್ ಪಡೆದು ಮನೆಗೆ ಬಂದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ಮೂಲದ ಅಮಿತ್ ಪ್ರಕಾಶ್ ಮೋಸ ಹೋಗಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ವಂಚಕನಿಗಾಗಿ ಶೋಧ ನಡೆಸುತ್ತಿದ್ದಾರೆ.
ಗುರುಗ್ರಾಮದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಅಮಿತ್ ಪ್ರಕಾಶ್ ಜೂ.9ರಂದು ಸಂಜೆ ಎಂದಿನಂತೆ ಬಾರೊಂದಕ್ಕೆ ಮದ್ಯ ಸೇವಿಸಲು ಹೋಗಿದ್ದಾರೆ. ಈ ವೇಳೆ ಇವರು ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ವಂಚಕನೊಬ್ಬ ಇವರಿಗೆ ಜೊತೆಯಾಗಿದ್ದಾನೆ.
ಅಮಿತ್ ಗೆ ಕುಡಿದ ಮತ್ತಿನಲ್ಲಿರುವುದನ್ನು ದುರುಪಯೋಗ ಪಡಿಸಿಕೊಂಡು ವೈನ್ ಬಾಟಲಿ ಖರೀದಿಸುವ ನೆಪದಲ್ಲಿ 2 ಸಾವಿರ ರೂಪಾಯಿ ಎಂದು 20,000 ವಸೂಲಿ ಮಾಡಿದ್ದಾನೆ. ಅಮಲೇರಿರುವ ಅಮಿತ್ ಪ್ರಕಾಶ್ ನನ್ನು ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಆತನದ್ದೇ ಕಾರನ್ನು ಚಾಲಾಯಿಸಿಕೊಂಡು ದೆಹಲಿಯಲ್ಲಿರುವ ಸುಭಾಷ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಅಮಿತ್ ಪ್ರಕಾಶ್ ನನ್ನು ಬಿಟ್ಟು ಪರಾರಿಯಾಗಿದ್ದಾನೆ. ಮಾರನೆಯ ದಿನ ಬೆಳಗ್ಗೆ ನಶೆ ಇಳಿಸಿಕೊಂಡ ಅಮಿತ್ ಗೆ ಹಿಂದಿನ ದಿನ ರಾತ್ರಿ ನಡೆದ ಘಟನೆ ನೆನಪಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.