ಶರತ್‌ ಮಡಿವಾಳ ಕುಟುಂಬಕ್ಕೆ ಸಿಗದ ಪರಿಹಾರ – ನೋವು ತೋಡಿಕೊಂಡ ತನಿಯಪ್ಪ ಮಡಿವಾಳ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ನಾಲ್ವರು ಯುವಕರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂ.ಗಳನ್ನು ಪರಿಹಾರದ ರೂಪದಲ್ಲಿ ಘೋಷಣೆ ಮಾಡಿದೆ. ಆದರೆ, 2017ರಲ್ಲಿ ಕೊಲೆಯಾದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕುಟುಂಬಕ್ಕೆ ಇನ್ನೂ ಪರಿಹಾರ  ಸಿಕ್ಕಿಲ್ಲ ಎಂದು ಶರತ್ ತಂದೆ ತನಿಯಪ್ಪ ಮಡಿವಾಳ ಅಳಲು ತೋಡಿಕೊಂಡಿದ್ದಾರೆ.

ಮಗ ಶರತ್ ಮಡಿವಾಳ ಆರ್ ಎಸ್ಎಸ್ ಕಾರ್ಯಕರ್ತನಾಗಿದ್ದ ಅನ್ನೋ ಕಾರಣಕ್ಕೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಯಾವ ಸರ್ಕಾರ ಸಹ ನ್ಯಾಯ ನೀಡಿಲ್ಲ. ಬಿಜೆಪಿ ಸರ್ಕಾರ ಸಹ ನಮಗೆ ನ್ಯಾಯ ನೀಡಿಲ್ಲ. ಎಲ್ಲಾ ಸರ್ಕಾರಗಳು ನಮ್ಮನ್ನು ಮೂಲೆಗುಂಪು ಮಾಡಿವೆ. ನನಗೆ ಈಗ ಎಪ್ಪತ್ತನಾಲ್ಕು ವರ್ಷ ವಯಸ್ಸಾಗಿದೆ. ಇನ್ನೂ ಸಹ ಲಾಂಡ್ರಿ ಅಂಗಡಿಯಿಂದಲೇ ಜೀವನ ಸಾಗುತ್ತಿದೆ, ಬಿಜೆಪಿ ಸರ್ಕಾರ ಮಗನ ಸಾವಿಗೆ ನ್ಯಾಯ ನೀಡಿಲ್ಲ, ಪುತ್ರಿ ಉನ್ನತ ವ್ಯಾಸಾಂಗ ಮಾಡಿದ್ರೂ ಸಹ ಇನ್ನೂ ಉದ್ಯೋಗ ದೊರಕಿಲ್ಲ, ಶರತ್ ಕೊಲೆಯಾದ ವೇಳೆ ಮನೆಗೆ ಬಂದಿದ್ದ ರಾಜಕೀಯ ಮುಖಂಡರುಗಳು ಭರವಸೆಗಳನ್ನು ಕೊಟ್ಟಿದ್ದರು. ಆದರೆ, ಭರವಸೆ ಕೊಟ್ಟು ಹೋಗಿದ್ದವರು ಮತ್ತೆ ಮರಳಿಲ್ಲ ಎಂದು ಅವರು ತಮ್ಮ ನೋವು ತೋಡಿಕೊಂಡಿದ್ದು, ಪುತ್ರ ಶರತ್ ಮಡಿವಾಳ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜುಲೈ 7, 2017ರಂದು ಬಂಟ್ವಾಳದ ಬಿ.ಸಿ. ರೋಡ್ ನ ಅಂಗಡಿಯಲ್ಲಿದ್ದ ವೇಳೆ ಶರತ್ ಮಡಿವಾಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ, ಹತ್ಯೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಶರತ್ ನನ್ನು ಪಕ್ಕದ ಅಂಗಡಿಯಲ್ಲಿದ್ದ ಮುಸಲ್ಮಾನ ವ್ಯಕ್ತಿ ಆಸ್ಪತ್ರೆಗೆ ಕರೆದೊಯ್ದು, ಮಾನವೀಯತೆ ಮೆರೆದಿದ್ದರು. ಆದರೆ, ತೀವ್ರ ರಕ್ತಸ್ರಾವದಿಂದ ಶರತ್ ಮಡಿವಾಳ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here