ಮಂಗಳೂರು: ವಾಹನ ತಯಾರಕರು ಟ್ರಕ್ ಗಳ ಚಾಲಕರ ಕ್ಯಾಬಿನ್ ಗಳಲ್ಲಿ ಹವಾನಿಯಂತ್ರಣವನ್ನು ಅಳಲು ಶೀಘ್ರವೇ ಕಡ್ಡಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಹಿಂದ್ರ ಲಾಜಿಸ್ಟಿಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಟ್ರಕ್ ಚಾಲಕರ ಕ್ಯಾಬಿನ್ ಗಳಲ್ಲಿ ಹವಾನಿಯಂತ್ರಣವನ್ನು ಕಡ್ಡಾಯಗೊಳಿಸುವ ಕಡತಕ್ಕೆ ನಾನು ಸಹಿ ಹಾಕಿದ್ದೇನೆ. ಟ್ರಕ್ ಗಳನ್ನು ಓಡಿಸುವವರನ್ನು ಚೆನ್ನಾಗಿ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ನಮ್ಮ ಚಾಲಕರು 43 ರಿಂದ 47 ಡಿಗ್ರಿ ಸೆಲ್ಸಿಯಸ್ ಗಳ ಕಠಿಣ ತಾಪಮಾನದಲ್ಲಿ ವಾಹನಗಳನ್ನು ಚಲಾಯಿಸುತ್ತಾರೆ. ಸಚಿವನಾದ ಬಳಿಕ ಎಸಿ ಕ್ಯಾಬಿನ್ ಗಳನ್ನು ತರಲು ನಾನು ಉತ್ಸುಕನಾಗಿದ್ದೆ. ಆದರೆ ಇದರಿಂದಾಗಿ ಟ್ರಕ್ ಗಳ ಬೆಲೆಗಳು ಹೆಚ್ಚುತ್ತವೆ ಎಂದು ಕೆಲವರು ವಿರೋಧಿಸಿದ್ದರು ಎಂದರು.
ಭಾರತದಲ್ಲಿ ಚಾಲಕರ ಕೊರತೆ ಇದೆ. ಹೀಗಾಗಿ ಟ್ರಕ್ ಚಾಲಕರು ದಿನದಲ್ಲಿ 14 ರಿಂದ 16 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ಗಡ್ಕರಿ ಇತರ ದೇಶಗಳಲ್ಲಿ ಟ್ರಕ್ ಚಾಲಕರು ನಿಗದಿತ ಅವಧಿಗೆ ಕರ್ತವ್ಯ ನಿರ್ವಹಿಸುತ್ತಾರೆ. ಅವರನ್ನು ಹೆಚ್ಚು ದುಡಿಸಲು ನಿರ್ಬಂಧವಿದೆ ಎಂದು ಹೇಳಿದರು. ಎ ಸಿ ಕ್ಯಾಬಿನ್ ಗಳನ್ನು ಹೊಂದಿರುವ ಟ್ರಕ್ ಗಳು ರಸ್ತೆ ಗಿಳಿಯಲು ಯಾವುದೇ ಗಡುವನ್ನು ಗಡ್ಕರಿ ಉಲ್ಲೇಖಿಸಲಿಲ್ಲ.