ಮಂಗಳೂರು: ಜೋರಾಗಿ ಮಳೆ ಬಂದು ನಿಂತ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಸಿಬ್ಬಂದಿ ರಸ್ತೆ ಬದಿಯ ಗಿಡಗಳಿಗೆ ನೀರು ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು ಎಲ್ಲೆಡೆ ಮಳೆ ಆಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಬೆಂಗಳೂರಿಗರು ಪರದಾಡುವಂತೆ ಆಗಿದೆ. ಮಳೆ ನಿಂತ ಮೇಲೂ ಮೋಡಕವಿದ ವಾತಾವರಣ ನಗರದ ತುಂಬಾ ಆವರಿಸಿದೆ. ಇಂಥ ವಾತಾವರಣದಲ್ಲಿ ಬಿಬಿಎಂಪಿ ಘನ ಗಂಭೀರ ಕೆಲಸವನ್ನೊಂದು ಮಾಡಿದೆ.
ಮಳೆ ನಿಂತ ಮೇಲೆ ಬಿಬಿಎಂಪಿ ಸಿಬ್ಬಂದಿಗಳು ಟ್ಯಾಂಕರ್ ಮೂಲಕ ನಗರದ ಪ್ರಮುಖ ರಸ್ತೆಗಳ ಡಿವೈಡರ್ ಗಳಲ್ಲಿರುವ ಗಿಡಗಳಿಗೆ ನೀರು ಹಾಯಿಸಿದ್ದಾರೆ. ಟ್ಯಾಂಕರ್ ಮೇಲೆ ವ್ಯಕ್ತಿಯೊಬ್ಬ ಕುಳಿತು ಪೈಪ್ ಮೂಲಕ ನೀರು ಹಾಕುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲಲ್ಲಿ ಕ್ಲಿಕಿಸಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದು ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ಮಳೆ ಬಿದ್ದಿದೆ, ಮಳೆನಿಂತ ಮೇಲೆ ಗಿಡಗಳಿಗೆ ನೀರು ಹಾಕಬೇಕಿತ್ತಾ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಆದರೆ ಮಳೆ ನಿಂತು ಹೋದ ಮೇಲೆ ಗಿಡಗಳಿಗೆ ನೀರು ಹಾಕಿದ್ದು ಯಾಕೆ ಎನ್ನುವ ನೆಟ್ಟಿಗರ ಪ್ರಶ್ನೆಗೆ ಬಿಬಿಎಂಪಿ ಯಾವುದೇ ಸ್ಪಷ್ಟನೆ ನೀಡಿಲ್ಲ.