



ಮಂಗಳೂರು: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.







ಅಲ್ಲದೇ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ, ಕೆ ಎಸ್ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಅಂತವರನ್ನು ಕಡೆಗಣಿಸಲಾಯಿತು. ಬಸವರಾಜ ಬೊಮ್ಮಾಯಿ ಕೈಗಳನ್ನು ಕಟ್ಟಿ ಹಾಕಿ ಅಧಿಕಾರ ಮಾಡಲಾಗಿದೆ. ಪಕ್ಷದ ಸೋಲಿಗೆ ಇದೂ ಒಂದು ಕಾರಣ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಹತ್ತಾರು ಬಾರಿ ಹೇಳಿದ್ದೇನೆ. ಯಡಿಯೂರಪ್ಪರ ಪರ ಮಾತನಾಡಿದರೆ ಅದು ಪಕ್ಷ ವಿರೋಧಿಯ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು, ಕಾರ್ಯಕರ್ತರನ್ನು ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ. ಈ ಮಾತನ್ನು ದಾವಣಗೆರೆ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿರಿಯರು ಹಾಗೂ ಜನರ ಒತ್ತಾಯಕ್ಕೆ ಮಣಿದು ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.



ಈ ಹೇಳಿಕೆ ನೀಡಿದ ಬೆನ್ನಲ್ಲಿಯೇ ಬಿಜೆಪಿ ರಾಜ್ಯ ಶಿಸ್ತು ಸಮಿತಿ ರೇಣುಕಾಚಾರ್ಯಗೆ ನೋಟಿಸ್ ನೀಡಿ ಕಾರಣ ಕೇಳಿದೆ. ಪಕ್ಷ ವಿರೋಧಿ ಹೇಳಿಕೆಗಳ ಕುರಿತು ಸಮಿತಿ ಅಧ್ಯಕ್ಷ ಲಿಂಗರಾಜ ನೋಟಿಸ್ ನೀಡಿದ್ದಾರೆ. ಒಂದು ವಾರದೊಳಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ. ತಮಗೆ ಸಾಕಷ್ಟು ಬಾರಿ ತಿಳಿ ಹೇಳಿದ್ದರೂ ತಾವು ಪದೇಪದೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ, ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರಗಿಸಬಾರದೆಂದು ಕೇಳಿ ನೋಟಿಸ್ ನೀಡಿದೆ.
ರಾಜ್ಯದಲ್ಲಿ ಬಿಜೆಪಿ ಬಣ ರಾಜಕೀಯ ಜೋರಾಗಿದ್ದು, ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್, ಯಡಿಯೂರಪ್ಪ ಹಾಗೂ ಬೊಮ್ಮಾಯಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಬಿಜೆಪಿಗೆ ಮುಜುಗರ ಉಂಟು ಮಾಡುತ್ತಿದ್ದರು. ಆದರೆ ಈಗ ಅವರಿಗೆ ನೋಟಿಸ್ ನೀಡದೆ ರೇಣುಕಾಚಾರ್ಯಗೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಪಕ್ಷದ ಆಂತರಿಕ ವಲಯದಲ್ಲಿ ಎದುರಾಗಿದೆ.











