ಮಂಗಳೂರು: ಹೆಣ್ಣಿನ ಮೋಹದಿಂದ ಮಂಗಳೂರಿಗೆ ಬಂದಿದ್ದ ಕೇರಳ ಮೂಲದ ಉದ್ಯಮಿಯನ್ನು ತಂಡವೊಂದು ಹನಿ ಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದು ಯುವತಿ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಫೆಬ್ರವರಿ 16ರಂದು ಕೇರಳ ಮೂಲದ ಮೊಯ್ದಿನ್ ಕುಂಞ್ಞ ಮತ್ತು ಮಹಮ್ಮದ್ ರುಕ್ಸಾದ್ ಎಂಬವರು ಮೂಡಬಿದ್ರೆ ಮೂಲದ ಹುಡುಗಿಯ ಜೊತೆಗೆ ರೆಸಾರ್ಟಿಗೆ ತೆರಳಿದ್ದರು. ಅವರು ಯುವತಿಯೊಂದಿಗೆ ಕೊಠಡಿಯಲ್ಲಿದ್ದ ವೇಳೆ ಎಂಟ್ರಿ ಕೊಟ್ಟ ಯುವಕರ ತಂಡ ಫೋಟೋ ತೆಗೆದು ವಿಡಿಯೋ ರೆಕಾರ್ಡ್ ಮಾಡಿದೆ. ಮಾತ್ರವಲ್ಲ ಮೊಯ್ದಿನ್ ಕುಂಞ್ಞಗೆ ಹಲ್ಲೆ ಮಾಡಿ ಹಣಕ್ಕಾಗಿ ಪೀಡಿಸಿದ್ದರು. ಹಣ ಕೊಟ್ಟರೆ ಮಾತ್ರ ಬಿಡ್ತೀವಿ, ಇಲ್ಲ ಅಂದ್ರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿದ್ದರು.
ಬೆದರಿದ ಮೊಯ್ದಿನ್ ಕುಂಞ್ಞ ಹಣ ಕೊಟ್ಟು ಅಲ್ಲಿಂದ ಪಾರಾಗಿದ್ದ. ಆದರೆ ಯುವಕರ ತಂಡ ಪದೇಪದೇ ಆತನಿಗೆ ಕರೆ ಮಾಡಿ ಹಣಕ್ಕಾಗಿ ಪೀಡಿಸುತ್ತಿತ್ತು. ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಮೂರು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡ ಮೊಯ್ದಿನ್ ಕುಂಞ್ಞ ಕಾವೂರ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕಮಿಷನರ್ ಸೂಚನೆಯಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪ್ರೀತಮ್ ಬೋಂದೇಲ್, ಮೂಡುಶೆಡ್ಡೆ ಆಸು ಪಾಸಿನ ಕಿಶೋರ್ ಮುರಳಿ, ಸುಶಾಂತ್, ಅಭಿ ಸೇರಿದಂತೆ ಮೂಡಬಿದ್ರೆ ಮೂಲದ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.