ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ, ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ-ಖುಷ್ಬೂ ಸುಂದರ್

ಮಂಗಳೂರು(ಉಡುಪಿ): ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೋಮು ಪ್ರಭಾವವಿಲ್ಲದೆ ತನಿಖೆ ನಡೆಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಒಂದುವರೆ ಗಂಟೆಗಳ ಕಾಲ ಎಸ್ ಪಿ ಹಾಗೂ ಡಿಸಿ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಇಂದು ರಾತ್ರಿ ವೇಳೆ ಮಾಧ್ಯಮದವರಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆ ಅಲ್ಲ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ. ನಮ್ಮದು ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ ಎಂದ ಅವರು ಯಾವುದೇ ಒಂದು ನಿರ್ದಿಷ್ಟ ಕೋಮುವಿನ ಮಹಿಳೆಯ ರಕ್ಷಣೆ ನಾವು ಬಂದಿಲ್ಲ. ದಯವಿಟ್ಟು ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಬೇಡಿ. ನಮಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಯಾವುದೇ ಫೋಟೋ ಅಥವಾ ವಿಡಿಯೋ ಲಭ್ಯವಿಲ್ಲ. ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಸ್ಪಷ್ಟತೆ ಸಿಗಬೇಕು ಎಂದು ಹೇಳಿದ ಖುಷ್ಬೂ, ಈ ಪ್ರಕರಣ ಇಷ್ಟೊಂದು ವೈರಲ್ ಆಗಲು ಕಾರಣವೇನು ಎಂಬುದರ ಬಗ್ಗೆ ಗಮನ ಹರಿಸಬೇಕು. ಅನೇಕ ಸಂಗತಿಗಳ ಕುರಿತು ತನಿಖೆ ಆಗಬೇಕಾಗಿದೆ. ಪೂರಕ ಸಾಕ್ಷಿಗಳ ಸಂಗ್ರಹ ಮಾಡಬೇಕಾಗಿದೆ. ನಾಳೆ ನಾನು ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿಯ ಜೊತೆ ಮಾತನಾಡಬೇಕಾಗಿದೆ. ಆ ಬಳಿಕ ಘಟನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.

ಈ ಘಟನೆಯನ್ನು ಇಟ್ಟುಕೊಂಡು ಅನೇಕ ಫೇಕ್ ವಿಡಿಯೋಗಳು ಹರಿದಾಡುತ್ತಿವೆ. ಹರಿದಾಡುತ್ತಿರುವ ಈ ವಿಡಿಯೋಗಳು ಯಾವುದು ಕೂಡ ಸತ್ಯವಲ್ಲ. ಇವರಿಗೆ ಯಾವುದೇ ವಿಡಿಯೋ ಸಾಕ್ಷ್ಯ ಲಭ್ಯವಾಗಿಲ್ಲ. ವಿದ್ಯಾರ್ಥಿನಿಯರ ಮೊಬೈಲ್ ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್ ಗಳನ್ನು ಪೊಲೀಸರು ರೆಟ್ರೀವ್ ಮಾಡಿದ್ದಾರೆ. 40 ಗಂಟೆಗಳ ಕಾಲ ರೆಟ್ರಿವ್ ಮಾಡಿದರೂ ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್‌ ಗಳ ಡಾಟಾ ಸಂಗ್ರಹ ಮಾಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದೆ. ಅಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಷಷ್ಟತೆ ಸಿಗಬಹುದು ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಉಗ್ರರ ಲಿಂಕ್ ಇದೆ ಎಂದು ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ. ಪ್ರಕರಣದ ಹಿಂದೆ ಅನೇಕ ಸಂಶಯಾಸ್ಪದ ಸಂಗತಿಗಳನ್ನು ಹರಿಬಿಡಲಾಗಿದೆ. ಘಟನೆಯ ಹಿಂದೆ ದೊಡ್ಡ ಕತೆ ಇದೆ ಎಂದು ಸದ್ಯ ಭಾವಿಸುವುದು ಬೇಡ. ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ ಎಂದು ಅವರು ತಿಳಿಸಿದರು. ಮಹಿಳಾ ಆಯೋಗ ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಒಳಗೊಂಡಿವೆ. ಸರಿಯಾದ ಹಾದಿಯಲ್ಲಿ ಪ್ರಕರಣದ ತನಿಖೆ ಆಗಬೇಕು. ತನಿಖೆಗೆ ಮೊದಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ ಎಂದರು.

ಎಫ್ಐಆರ್ ವಿಳಂಬ ವಿಚಾರ ಬಗ್ಗೆ ಪ್ರತಿಕ್ರಿಸಿದ ಅವರು, ಕಾಲೇಜು ಆಡಳಿತ ಮಂಡಳಿ ನಿನ್ನೆ ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದೆ. ಯಾವುದೇ ದೂರು ಬಾರದ ಕಾರಣ ಪೊಲೀಸರು ದೂರು ದಾಖಲಿಸಿಲ್ಲ. ಸಂತ್ರಸ್ತೆ ದೂರು ಕೊಟ್ಟಿಲ್ಲ. ತಾನು ದೂರು ನೀಡಲು ಬಯಸುವುದಿಲ್ಲ ಎಂದು ಸಂತ್ರಸ್ತೆ ಪತ್ರದ ಮೂಲಕ ಹೇಳಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಪತ್ರಿಕಾಗೋಷ್ಠಿಯ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದರು.

ವಿಡಿಯೋ ಇತ್ತು ಮತ್ತು ಅದನ್ನು ನಾವು ಡಿಲೀಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ವಿಡಿಯೋ ಡಿಲೀಟ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಸುಳಿವು ಇಲ್ಲದೆ ಪೊಲೀಸರು ಪ್ರಕರಣ ದಾಖಲಿಸುವುದು ಹೇಗೆ? ಹಿಂದೆ ನಿಂತು ಪೊಲೀಸರನ್ನು ದೂರುವುದು ಸುಲಭ. ಈಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿದ ಅವರು, ಪ್ರಕರಣದ ತನಿಖೆಯಲ್ಲಿ ವಿಳಂಬವಾದರೆ ಮಹಿಳಾ ಆಯೋಗ ಕ್ರಮ ಕೈಗೊಳ್ಳುತ್ತದೆ. ಸದ್ಯ ನಾವು ಸುಮೋಟೋ ಪ್ರಕರಣ ದಾಖಲಿಸಲು ನಿರ್ಧರಿಸಿಲ್ಲ. ಮಾಹಿತಿ ಸಂಗ್ರಹದ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದು ಖುಷ್ಬೂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here