ಮಂಗಳೂರು(ಬೆಂಗಳೂರು): ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಯಾವ್ಯಾವ ತಾಲ್ಲೂಕುಗಳು ಬರ ಘೋಷಣೆಗೆ ಅರ್ಹವಾಗುತ್ತವೆ ಎನ್ನುವುದನ್ನು ಗುರುತಿಸಲು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಆಗಸ್ಟ್ 31ರ ಒಳಗೆ ಬೆಳೆ ನಷ್ಟದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವು ತಾಲ್ಲೂಕುಗಳಿಂದ ಈಗಾಗಲೇ ಮಾಹಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಚಿವ ಸಂಪುಟ ಉಪ ಸಮಿತಿಯ ಸಭೆ ಸೆ. 4ರಂದು ನಡೆಯಲಿದೆ. ಈ ಸಭೆಯಲ್ಲಿ ಎಷ್ಟು ತಾಲ್ಲೂಕುಗಳು ಬರಪೀಡಿತ ಎನ್ನುವುದನ್ನು ಅಂತಿಮಗೊಳಿಸಿ ಘೋಷಿಸಲಾಗುವುದು. ಈ ತಾಲ್ಲೂಕುಗಳಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನಿಸಲಾಗುವುದು. ಈ ಬಗ್ಗೆ ವಾರದೊಳಗೆ ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಲಾಗುವುದು ಎಂದರು. ಮಳೆ ಕೊರತೆ, ಬೆಳೆ ಸಮೀಕ್ಷೆ ಆಧರಿಸಿ ಮುಂದೆ ಪ್ರತಿ 15 ದಿನಗಳಿಗೊಮ್ಮೆ ಬರ ಪೀಡಿತ ತಾಲ್ಲೂಕುಗಳ ಹೊಸ ಪಟ್ಟಿ ತಯಾರಿಸಲಾಗುವುದು. ಬರ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿವೇಚನೆ ಬಳಸುವಂತೆ ಇಲ್ಲ. ಕೇಂದ್ರದ ಮಾರ್ಗಸೂಚಿಯೇ ಅಂತಿಮ. ಈ ಮಾರ್ಗಸೂಚಿಯನ್ನು ಸರಳಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ, ಕೇಂದ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ತೀವ್ರ ಮಳೆ ಕೊರತೆ ಎದುರಿಸುತ್ತಿರುವ ರಾಜ್ಯದ 113 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಗುರುತಿಸಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿರುವುದು ಇದೇ ಮೊದಲು. ಹಿಂದೆಂದೂ ಈ ಪ್ರಮಾಣದಲ್ಲಿ ಮಳೆ ಕೊರತೆ ಆಗಿರಲಿಲ್ಲ. ಯಾವುದೇ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವ ಮೊದಲು ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಈಗ ಮೂರನೇ ಹಂತದಲ್ಲಿ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗುತ್ತಿದೆ. ಮಳೆಯ ತೀವ್ರ ಕೊರತೆ ಎದುರಿಸುತ್ತಿರುವ ತಾಲ್ಲೂಕುಗಳಲ್ಲಿ ಈ ಸಮೀಕ್ಷೆ ನಡೆಯುತ್ತಿದೆ. ಮೂರು ಸಮೀಕ್ಷೆಗಳ ಆಧಾರದಲ್ಲಿ ತೀವ್ರ ಅಥವಾ ಸಾಧಾರಣ ಬರ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಅಕ್ಟೋಬರ್ ವೇಳೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.