ಮಂಗಳೂರು(ಬೆಂಗಳೂರು): ಸೂರ್ಯನ ಅಧ್ಯಯನಕ್ಕಾಗಿ ಸೆ.2ರಂದು ಉಡಾವಣೆಗೊಳ್ಳಲಿರುವ ‘ಆದಿತ್ಯ ಎಲ್-1’ನ ಉಡಾವಣಾ ಪೂರ್ವಾಭ್ಯಾಸ ಮತ್ತು ಆಂತರಿಕ ಪರೀಕ್ಷೆಯನ್ನು ಇಸ್ರೋ ಆ.30ರಂದು ಪೂರ್ಣಗೊಳಿಸಿದೆ.
ಶ್ರೀಹರಿಕೋಟಾದ ಅಂತರಿಕ್ಷ ಉಡಾವಣಾ ಕೇಂದ್ರದಿಂದ ಸೆ.2ರಂದು ಬೆಳಿಗ್ಗೆ 11.50 ಕ್ಕೆ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ಮೂಲಕ ಅಂತರಿಕ್ಷ ನೌಕೆಯ ಉಡಾವಣೆ ನಡೆಯಲಿದೆ. ಇದರಲ್ಲಿ ಸೂರ್ಯನ ಅಧ್ಯಯನ ನಡೆಸಲು ಒಟ್ಟು ಏಳು ಉಪಕರಣಗಳು ಇರಲಿವೆ. ಈ ಕುರಿತು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಉಡಾವಣೆಗೆ ಎಲ್ಲ ರೀತಿಯ ಸಿದ್ಧತೆಗಳು ಪ್ರಗತಿಯಲ್ಲಿವೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ಪರೀಕ್ಷೆಗಳೂ ಪೂರ್ಣಗೊಂಡಿವೆ ಎಂದು ಹೇಳಿದೆ.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲೆಂಗ್ರಾಜ್ ಎಲ್ -1 ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುವುದು. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಯನ್ನು ಗಮನಿಸುತ್ತದೆ. ನಾಲ್ಕು ಪ್ರತ್ಯೇಕ ಪೇಲೋಡ್ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ (ಕರೋನಾ) ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಪೇಲೋಡ್‌ಗಳು ಆಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ. ಆದಿತ್ಯ ಎಲ್-1 ಸಂಪೂರ್ಣ ದೇಶಿಯವಾಗಿ ನಿರ್ಮಿಸಲಾಗಿದೆ ಎಂದು ಇಸ್ರೋ ಹೇಳಿದೆ.