ಮಾಣಿಬೆಟ್ಟುಗುತ್ತು ಜೋಡುಕರೆ ಕಂಬಳಕ್ಕೆ ಸಿದ್ಧತೆ-ಅ.22ರಂದು ಜೋಡುಕರೆ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್

ಮಂಗಳೂರು: ಮಂಗಳೂರು ತಾಲೂಕಿನ, ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟುಗುತ್ತು ಎಂಬಲ್ಲಿ ಸರ್ವ ಜಾತಿ, ಧರ್ಮ, ಪಕ್ಷಗಳನ್ನು ಒಗ್ಗೂಡಿಸುವ ಕರಾವಳಿಯ ಜಾನಪದ ಕ್ರೀಡೆಗಳಲ್ಲೊಂದಾದ ಜೋಡುಕರೆ ಕಂಬಳವನ್ನು 2023-24ನೇ ಸಾಲಿನಲ್ಲಿ ನಡೆಸಲು ಉದ್ದೇಶಿಸಿದ್ದು, ಇದರ ಪೂರ್ವಭಾವಿಯಾಗಿ  ನೂತನ ಕರೆಯ ನಿರ್ಮಾಣಕ್ಕಾಗಿ ಭೂಮಿ ಪೂಜೆಯು ತಾರೀಕು 22-10-2023ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 8-55ರ ಸುಮುಹೂರ್ತದಲ್ಲಿ ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಕಂಬಳ ಕ್ಷೇತ್ರದ ದಿಗ್ಗಜರು ಹಾಗೂ ಮೂಳೂರು, ಅಡೂರು ಗ್ರಾಮಕ್ಕೆ ಸಂಬಂಧಪಟ್ಟ ಗುತ್ತು ಗಡಿಕಾರರ, ಧಾರ್ಮಿಕ ಮುಖಂಡರುಗಳ, ರಾಜಕೀಯ ನೇತಾರರ ಹಾಗೂ ಸಮಾಜ ಚಿಂತಕರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಘಟಕರಾದ ರಾಜಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಕರೆಯು 135 ಮೀಟರ್ ಉದ್ದ, 12 ಮೀಟರ್ ಅಗಲವಿದ್ದು, ಕೋಣ ಬಿಡುವ (ಗಂತ್) 12 ಮೀಟರ್ ಉದ್ದ, 20 ಮೀಟರ್ ಅಗಲ ಹೊಂದಿರುತ್ತದೆ. 30 ಎಕರೆಗಿಂತ ಹೆಚ್ಚು ಪಾರ್ಕಿಂಗ್ ಹಾಗೂ ಇನ್ನಿತರ ವ್ಯವಸ್ಥೆಗೆ ಮೀಸಲಿಡಲಾಗಿದೆ. ಮಂಗಳೂರಿನಿಂದ ಸುಮಾರು 14 ಕಿ.ಮೀ. ದೂರದಲ್ಲಿ ನೂತನ ರಾಷ್ಟ್ರೀಯ ಹೆದ್ದಾರಿ -169ರ ಬೈಪಾಸ್‌ ಪಕ್ಕದಲ್ಲಿ ಕಂಬಳದ ಕರೆ ಇರುತ್ತದೆ. ಗುರುಪುರ ಕೈಕಂಬ ಜಂಕ್ಷನ್‌ನಿಂದ 3 ಕಿ.ಮೀ. ಬಿ.ಸಿ.ರೋಡ್, ಕಲ್ಲಿಗೆ ಜಂಕ್ಷನ್‌ನಿಂದ 14 ಕಿ.ಮೀ, ಈ ಕಂಬಳದಲ್ಲಿ 175ಕ್ಕಿಂತಲೂ ಹೆಚ್ಚು ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಕಂಬಳವು ವಿನೂತನ ಪರಿಕಲ್ಪನೆಯಲ್ಲಿ ನಡೆಯಲಿದೆ ಎಂದು ರಾಜಕುಮಾರ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here