ಮಂಗಳೂರು/ಪುತ್ತೂರು: ನವರಾತ್ರಿ 8ನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯನ್ನು ವೃಷಾರೂಢ ಎಂದು ಕರೆಯಲಾಗುತ್ತದೆ. ಮಹಾಗೌರಿ ದೇವಗೆ ನಾಲ್ಕು ಕೈಗಳಿದ್ದು, ಬಲಗೈಗಳಲ್ಲಿ ತ್ರಿಶೂಲ ಮತ್ತು ಅಭಯ ಮುದ್ರೆಯನ್ನು ಹಿಡಿದಿದ್ದಾಳೆ. ಎಡಗೈಗಳಲ್ಲಿ ಡಮರುಗ ಮತ್ತು ವರದಮುದ್ರೆ ಇದೆ. ಗೂಳಿಯು ಮಹಾಗೌರಿ ದೇವಿಯ ವಾಹನವಾಗಿದೆ.
ಮಹಾಗೌರಿ ದೇವಿ ಪೂಜಾ ವಿಧಿ
ಮಹಾಸ್ನಾನ ಮತ್ತು ಷೋಡಶೋಪಚಾರ ಪೂಜೆಯೊಂದಿಗೆ ಗೌರಿ ಪೂಜೆ ಪ್ರಾರಂಭವಾಗುತ್ತದೆ. 9 ಸಣ್ಣ ಮಡಿಕೆಗಳನ್ನು ಸ್ಥಾಪಿಸಿ ದುರ್ಗೆಯ 9 ಶಕ್ತಿಗಳನ್ನು ಆವಾಹನೆ ಮಾಡಲಾಗುತ್ತದೆ. ಜನರು ಈ ದಿನ ಕುಮಾರಿ ಪೂಜೆಯನ್ನೂ ಮಾಡುತ್ತಾರೆ. ಅಷ್ಟಮಿ ತಿಥಿಯ ಕೊನೆಯ 24 ನಿಮಿಷಗಳು ಮತ್ತು ನವಮಿತಿಥಿಯ ಮೊದಲ 24 ನಿಮಿಷಗಳು ಸಂಧಿಪೂಜೆಗೆ ಮಂಗಳಕರ ಸಮಯ.
ಮಹಾಗೌರಿ ಪೂಜೆಯ ಮಹತ್ವ
ಮಹಾಗೌರಿ ಪೂಜೆಯು ಭಕ್ತರ ಎಲ್ಲಾ ಪಾಪಗಳನ್ನು ಕ್ಷಮಿಸುತ್ತದೆ ಎಂದು ನಂಬಲಾಗಿದೆ ಮತ್ತು ಭಕ್ತರಿಗೆ ಪುಣ್ಯ ಪ್ರಾಪ್ತಿ ಮಾಡುತ್ತದೆ. ಭಕ್ತರ ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಪರಿಹರಿಸಿ ತನ್ನ ಆಶೀರ್ವಾದದಿಂದ ದುಖಃಗಳನ್ನು ದೂರ ಮಾಡುತ್ತಾಳೆ. ಆಸೆಗಳನ್ನು ಈಡೇರಿಸಿ ಗುರಿ ಮುಟ್ಟಲು ನೆರವಾಗುತ್ತಾಳೆ.
ಮಹಾಗೌರಿ ಮಂತ್ರ
ಓಂ ದೇವಿ ಮಹಾಗೌರ್ಯೈ ನಮಃ
ಮಹಾಗೌರಿ ಕಥೆ
ಪರ್ವತರಾಜ ಹಿಮಾಲಯನ ಮನೆಯಲ್ಲಿ ಜನಿಸಿದ ನಂತರ ತಾಯಿ ಪಾರ್ವತಿ ಶಿವನನ್ನು ತನ್ನ ಪತಿಯಾಗಿ ಪಡೆಯಲು ಉಪವಾಸ ಮಾಡಿ ತಪಸ್ಸು ಮಾಡುತ್ತಾಳೆ. ಇದರಿಂದ ತಾಯಿಯ ದೇಹವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ತಾಯಿಯ ಕಠೋರ ತಪಸ್ಸಿನಿಂದ ಸಂತುಷ್ಟನಾದ ಶಿವನು ಪಾರ್ವತಿಯನ್ನು ತನ್ನ ಮಡದಿಯಾಗಿ ಸ್ವೀಕರಿಸುತ್ತಾನೆ. ಗಂಗಾ ನದಿಯ ಪವಿತ್ರ ನೀರಿನಿಂದ ತೊಳೆದು ಅವಳನ್ನು ಅತ್ಯಂತ ಪ್ರಕಾಶಮಾನವಾಗಿ ಮಾಡುತ್ತಾನೆ. ಮಹಿಮೆಯಾದ ತಾಯಿಯ ರೂಪವನ್ನು ಮಹಾಗೌರಿ ಎಂದು ಕರೆಯಲಾಯಿತು.
ಗೌರಿ ಪೂಜೆ
ದುರ್ಗೆಯ 8ನೇ ರೂಪವನ್ನು ಮಾತಾ ಮಹಾಗೌರಿ ಎಂದು ಕರೆಯಲಾಗುತ್ತದೆ. ಮಹಾಗೌರಿಗೆ ತೆಂಗಿನಕಾಯಿಯನ್ನುನ ಅರ್ಪಿಸಲಾಗುತ್ತದೆ. ತನ್ನನ್ನು ಪೂಜಿಸುವ ಭಕ್ತರಿಗೆ ತಾಯಿಯು ತನ್ನ ಆಶೀರ್ವಾದವನ್ನು ನೀಡುತ್ತಾಳೆ. ತೆಂಗಿನಕಾಯಿ ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಮಾತೆ ಗೌರಿಗೆ ಅರ್ಪಿಸುವುದರಿಂದ ತಾಯಿಯು ಸಂತುಷ್ಟಳಾಗುತ್ತಾಳೆ.