ಮಂಗಳೂರು(ಬೆಂಗಳೂರು): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ರಸ್ತೆಯಲ್ಲಿ ಒಂಟಿಯಾಗಿ ಹೋಗುವವರನ್ನು ಟಾರ್ಗೆಟ್ ಮಾಡಿ ಅವರಿಂದ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿವೆ.
ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ಹೊತ್ತು ಒಬ್ಬ ವ್ಯಕ್ತಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಸ್ಕೂಟಿಯಲ್ಲಿ ಬಂದ ಇಬ್ಬರು ದರೋಡೆಕೋರರು ಆತನಿಗೆ ಲಾಂಗ್ ತೋರಿಸಿ, ಬೆದರಿಸಿ ಹಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ ಘಟನೆ ನಗರದ ಹಲಸೂರು, ರಾಮಮೂರ್ತಿನಗರ ಸುತ್ತಾಮುತ್ತಾ ನಡೆದಿದೆ. ಆ ವ್ಯಕ್ತಿಯು ತನ್ನನ್ನು ಬಿಟ್ಟುಬಿಡುವಂತೆ ಕೈ ಮುಗಿದು ಅಂಗಲಾಚಿದ್ದರೂ, ಬಿಡದ ಆರೋಪಿಗಳು ಶರ್ಟ್, ಪ್ಯಾಂಟ್‌ಗಳಲ್ಲಿ ಹಣವನ್ನು ಹುಡುಕಿ ಬೆದರಿಕೆ ಹಾಕಿ, ಆತನಿಗೆ ಹಲ್ಲೆ ನಡೆಸಿ ಆತನಿಂದ ಮೊಬೈಲ್, ವಾಚ್ ಮತ್ತು ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದರೋಡೆ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.