ಮಂಗಳೂರು(ಉಡುಪಿ): ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಲ್ಕುಟದ ಭರತ್ ದೋಟ ಇವರ ಜಾಗದಲ್ಲಿ ‘ಬಾಕುಲಜ್ಜ’ ಎಂದು ಸ್ಥಳೀಯರಿಂದ ಕರೆಯಲ್ಪಡುವ ನರಸಿಂಹ ವಿಗ್ರಹವನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿ ವಿಶಾಲ್ ರೈ ಕೆ ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಸ್ಥಳೀಯರು ತಮ್ಮ ದನ-ಕರುಗಳು ಅಸ್ವಸ್ಥ ಅಥವಾ ಕಾಣೆಯಾದ ಸಂದರ್ಭದಲ್ಲಿ ಈ ಬಾಕುಲಜ್ಜನಿಗೆ (ನರಸಿಂಹ) ಹರಕೆಯನ್ನು ಸಲ್ಲಿಸಿ, ಇಂದಿಗೂ ಪೂಜಿಸಿ ರಕ್ಷಿಸಿಕೊಂಡು ಬರಲಾಗುತ್ತಿದೆ. ವಿಗ್ರಹದ ಪೀಠಭಾಗವು ಭೂಮಿಯಲ್ಲಿ ಹುದುಗಿದ್ದು, ಭೂ ಮೇಲ್ಮೈಯಿಂದ ಸುಮಾರು 2.5 ಅಡಿ ಎತ್ತರವಿರುವ ಈ ವಿಗ್ರಹವನ್ನು ಕುಳಿತಿರುವಂತೆ ಕೆತ್ತನೆ ಮಾಡಲಾಗಿದೆ. ಸಿಂಹದ ಮುಖ ಮತ್ತು ಮನುಷ್ಯ ದೇಹ ರಚನೆಯನ್ನು ಹೊಂದಿರುವ ದ್ವಿಭುಜ ಧಾರಿಯಾಗಿರುವ ಈ ನರಸಿಂಹ ಶಿಲ್ಪವು ತನ್ನ ಎಡಗೈಯನ್ನು ಎಡತೊಡೆಯ ಮೇಲೆ ಹಾಗೂ ತನ್ನ ಬಲಗೈಯಲ್ಲಿ ಬಹು ಬೀಜಫಲವನ್ನು ಹಿಡಿದು ಬಲಗಾಲಿನ ಮೊಣಗಂಟಿನ ಮೇಲೆ ಇರಿಸಿ ಕುಳಿತ ಭಂಗಿಯಲ್ಲಿದೆ. ಶಿಲ್ಪದಲ್ಲಿ ಕಂಠಪಟ್ಟಿ, ತೋಳ್ಭಂದಿ, ಕೈಗಡಗದ ವಿನ್ಯಾಸವನ್ನು ಕಾಣಬಹುದಾಗಿದೆ.
ಇದೇ ಮಾದರಿಯ ಇನ್ನೊಂದು ಮೂರ್ತಿಯು ಪೊಳಲಿ ರಾಜರಾಜೇಶ್ವರಿ ದೇವಾಲಯದ ಹತ್ತಿರವಿರುವ ಕೊಟ್ಟಾರಿಪಾಲು ಪ್ರದೇಶದ ನಾರಾಯಣ ಭಟ್ ಇವರ ಜಾಗದಲ್ಲಿದ್ದು, ಇದರ ಕಾಲಮಾನವನ್ನು ಪಾದೂರು ಗುರುರಾಜ ಭಟ್ಟರು ತಮ್ಮ ಸಂಶೋಧನಾ ಗ್ರಂಥವಾದ ‘ಸ್ಟಡೀಸ್ ಇನ್ ತುಳುವ ಹಿಸ್ಟರಿ ಆಂಡ್ ಕಲ್ಚರ್’ನಲ್ಲಿ 8-9 ನೇ ಶತಮಾನದ್ದೆಂದು ಹೇಳಿರುತ್ತಾರೆ. ಅದೇ ಹೋಲಿಕೆಯನ್ನು ಹೊಂದಿರುವ ಈ ಶಿಲ್ಪವು ಸಹ ಕಾಲಮಾನದ ದೃಷ್ಟಿಯಿಂದ ಸುಮಾರು 8-9ನೇ ಶತಮಾನಕ್ಕೆ ಸೇರಿರಬಹುದೆಂದು ಅಂದಾಜಿಸಿಲಾಗಿದೆ.ಕ್ಷೇತ್ರಕಾರ್ಯ ಶೋಧನೆಯಲ್ಲಿ ವಿಜಿತಾ ಅಮೀನ್, ರೋಹಿತಾಕ್ಷ, ಸೂರಜ್ ಪೊಳಲಿ ಮತ್ತು ಕೃಷ್ಣ ಪೊಳಲಿಯವರು ಸಹಕಾರ ನೀಡಿದ್ದಾರೆ ಎಂದು ಸಂಶೋಧಕ ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.