ಬೇಡ… ಬೇಡ…ಬೇಡ… ಇದರಿಂದ ದೂರವಿರಿ-ಇದರ ಚಟಕ್ಕೆ ಬಿದ್ದರೆ ಚಟ್ಟ ಗ್ಯಾರಂಟಿ

ನಿಷಿದ್ದ ಮಾದಕ ದ್ರವ್ಯ ಸಿಗುವುದಾದರೂ ಎಲ್ಲಿಂದ?
ಬದುಕು ಕಳೆದುಕೊಳ್ಳುತ್ತಿರುವ ಮಾದಕ ವ್ಯಸನಿಗಳು
ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿರುವ ಯುವ ಸಮೂಹ
ಏನೂ ಮಾಡಲು ಹೇಸದ ವ್ಯಸನಿಗಳು
ಬಿಳಿ ಹುಡುಗಿಯ ಕರಾಳ ಮುಖ
ಮಾದಕ ದ್ರವ್ಯಕ್ಕೆ ಹತ್ತು ಹಲವು ಹೆಸರು

ಮಂಗಳೂರು/ಪುತ್ತೂರು: ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರು ಮಾದಕ ಪದಾರ್ಥಗಳನ್ನು ಸೇವನೆ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅದರ ದಾಸರಾಗುತ್ತಿದ್ದಾರೆ. ಈ ಚಟಕ್ಕೆ ಯಾವುದೇ ವಯಸ್ಸಿನವರು ಬಲಿ ಬೀಳಬಹುದಾದರೂ ಯುವಕರು, ಆರ್ಥಿಕ ದುರ್ಬಲರು ಮತ್ತು ಸಬಲರು ಹೆಚ್ಚಿನ ಸಂಖ್ಯೆಯಲ್ಲಿ ಇದರ ದಾಸರಾಗುತ್ತಿದ್ದಾರೆ.

ಆರಂಭದಲ್ಲಿ ಆನಂದ…ಕೊನೆಯಲ್ಲಿ ಖೇದ:

ಮಾದಕ ದ್ರವ್ಯದ ಸೇವನೆ ಬೃಹದಾಕಾರವಾಗಿ ಬೆಳೆದಿದ್ದು, ವಿಶ್ವ ವ್ಯಾಪಿಯಾಗಿ ಮಾದಕ ವಸ್ತುಗಳ ಸೇವನೆ ಜೀವನ ಶೈಲಿ ಎಂಬಂತಾಗಿದೆ. ನೈಸಿರ್ಗಿಕವಾಗಿ ದೊರೆಯುವ ಸಸ್ಯಗಳಲ್ಲದೇ ಪ್ರಯೋಗ ಶಾಲೆಯಲ್ಲಿ ಕೃತಕವಾಗಿ ಸೃಷ್ಟಿಸಿದ ಮೆಥಕ್ವಲಾನ್‌, ಕ್ಲೋರಾಲ್‌ ಹೈಡ್ರೇಟ್‌ ನಂತಹ ರಾಸಾಯನಿಕಗಳು ಈಗ ಬಳಕೆಯಲ್ಲಿದೆ. ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಮುನ್ನ, ಟ್ರಕ್‌ ಚಾಲಕ ದೂರ ಪ್ರವಾಸಕ್ಕೆ ಹೋಗುವ ವೇಳೆ ರಾತ್ರಿ ಎಚ್ಚರದಿಂದಿರಲು ಅಂಫಿಟಮಿನ್ ನಂತಹ ವಸ್ತು ಸೇವಿಸುತ್ತಾರೆ. ಇನ್ನು ಕೆಲವರು ಮಾದಕ ವಸ್ತುಗಳ ಬಗೆಗಿನ ತಮ್ಮ ಕುತೂಹಲ ತಣಿಸಲು, ಜೀವನದ ಬೇಸರವನ್ನು ಕಳೆದುಕೊಳ್ಳಲು, ನೀರಸ ವಾತಾವರಣದಿಂದ ಹೊರಬರಲು, ಸುಖದ ಅನುಭವ ಪಡೆಯಲು, ಕೆಲವೊಮ್ಮೆ ಬೇರೆಯವರ ಒತ್ತಾಸೆಗೆ ಒಳಪಟ್ಟು ಮಾದಕ ದ್ರವ್ಯಗಳ ಸೇವನೆ ಪ್ರಾರಂಭಿಸುತ್ತಾರೆ. ಅದರ ಸ್ವಚ್ಛಂದ ಸೇವನೆ ದುರುಪಯೋಗವಾಗಿ ಮುಂದೊಮ್ಮೆ ಅಭ್ಯಾಸ ಅಥವಾ ಚಟವಾಗಿ ಬದಲಾಗುತ್ತದೆ. ಅಮಲು ತರಿಸುವ ಈ ದ್ರವ್ಯಕ್ಕೆ ಅವಲಂಬಿತರಾಗಿ ಅವುಗಳನ್ನು ಹೇಗಾದರೂ ಮಾಡಿ ದೊರಕಿಸಬೇಕೆನ್ನುತ್ತಾರೆ. ಇದರ ಚಟಕ್ಕೆ ಬಿದ್ದವರ ಪ್ರಕೃತಿ ಅದಕ್ಕೆ ಒಗ್ಗಿ ದೈಹಿಕವಾಗಿ, ಮಾನಸಿಕವಾಗಿ ಅವುಗಳನ್ನು ಅವಲಂಬಿಸುತ್ತಾರೆ. ದೇಹದ ಮೇಲೆ ಅನೇಕ ಬಗೆಯ ಅಡ್ಡ ಪರಿಣಾಮಗಳಿಗೆ ಎಡೆಮಾಡಿಕೊಟ್ಟು ವಿಷಕಾರಿ ಪ್ರಭಾವ ಬೀರುತ್ತದೆ. ಹೀಗಾಗಿ ಮಾದಕ ದ್ರವ್ಯ ಸೇವನೆ ಚಟ ಮಾತ್ರವಲ್ಲದೆ ಮಾರಕ ಕಾಯಿಲೆಯೂ ಹೌದು. ಈ ಚಟಕ್ಕೆ ಬಿದ್ದವರಲ್ಲಿ ಅವುಗಳ ಸೇವನೆ ಬಗ್ಗೆ ಆಸಕ್ತಿ ದಿನೇ ದಿನ ಹೆಚ್ಚುತ್ತಾ ಹೋಗುತ್ತದೆ. ಅವರು  ಭಾವನಾತ್ಮಕವಾಗಿ ಅಧಪತನದತ್ತ ಸಾಗುತ್ತಾರೆ.  ಈ ವಸ್ತುಗಳನ್ನು ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಕಾಲ ಕಳೆದಂತೆ ಅವುಗಳ ಪ್ರಭಾವವನ್ನು ಕಾಯ್ದಿರಿಸಲು ಸೇವನೆಯ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ.

ಮಾದಕ ದ್ರವ್ಯಕ್ಕೆ ನೂರೆಂಟು ಹೆಸರು:

ಅನೇಕ ಮಾನಸಿಕ ಉತ್ತೇಜಕ ಔಷಧಿಗಳು ಮಾದಕ ದ್ರವ್ಯಗಳಾಗಿ ಪರಿಣಮಿಸಿದೆ. ಅಫೀಮ್‌ ಮೂಲದ ಮಾರ್ಫಿನ್‌, ಪೆಥಡಿನ್, ಹೆರೋಯಿನ್‌ ನಂತಹ ನೋವು ಶಾಮಕಗಳು, ನರಮಂಡಲವನ್ನು ಮಂದಗೊಳಿಸಿ ನಿದ್ರಾಪರವಶತೆಯನ್ನುಂಟು ಮಾಡುವ ಬಾರ್ಬಿಚುರೇಟ್‌ ಗಳು, ಅಂಫಿಟಮಿನ್‌, ಕೊಕೇನ್‌ ಮತ್ತು ಮನೋ ವಿಕಾರಿ ಮೆಸ್ಕಲಿನ್‌ ಹಾಗೂ ಎಲ್‌ ಎಸ್‌ ಡಿ ಚಟಕ್ಕೆ ಬಿದ್ದವರು ಒಂದಕ್ಕಿಂತ ಹೆಚ್ಚು ಅಮಲು ಬರಿಸುವ ಪದಾರ್ಥಗಳನ್ನು ಸೇವಿಸುತ್ತಾರೆ. ಡ್ರಗ್‌ ಪೆಡ್ಲರ್‌ ಗಳು ಇದನ್ನು ಬೇರೆಬೇರೆ ಹೆಸರಿನಿಂದ ಕರೆಯುತ್ತಿದ್ದು ಈ ಚಟ ವಿಶ್ವವ್ಯಾಪಿಯಾಗಿದೆ ಎಂಬುವುದನ್ನು ದೃಢಪಡಿಸುತ್ತದೆ. ಕ್ರ್ಯಾಕ್‌, ಪಾಟ್‌, ಫಿಕ್ಸ್‌, ಬ್ರೌನ್‌ ಶುಗರ್‌, ಕ್ಯಾಂಡಿ, ಮೂರ್ಖರ ಪುಡಿ, ಲೇತಿ, ಪ್ರೀತಿ ಔಷಧಿ, ಬಿಳಿ ಹುಡುಗಿ, ಅಟೋಬಾಂಬ್‌, ಆಂಟಿ, ಕಣ್ದೆರೆಯಿರಿ, ಸಂತೋಷ ಹುಡುಕಿ, ಬ್ಲಾಕ್‌ ಬಾಟಲ್‌, ಪೊದೆ, ದೇವರ ಔಷಧಿ, ಗ್ರಾಸ್‌, ಬಂಗಾರ, ಹಲ್ಲುಗಿಂಜು, ಹವಾಯಿ, ಸೂರ್ಯಪ್ರಕಾಶ, ಜಾಯಿಂಟ್‌, ಮಷಿನರಿ, ನಗುವ ಹುಲ್ಲು, ಮ್ಯಾಕ್ಸಿನ್‌ ಬ್ರೌನ್‌, ಅಕುಪುಲ್ಕೊ, ಬೇರು, ಬ್ಲ್ಯಾಕ್‌ ರಷಿಯನ್‌, ಬೂಬೂ, ಬೆಣ್ಣೆ ಹೂ, ಜಗಿಯುವ ಬೀಜ, ಶಿಕಾಗೋ ಗ್ರೀನ್‌, ಮ್ಯಾಗಿ, ಡಿಂಗ್‌, ಬಟ್ಟ್‌, ಎಂ ಜೆ, ಪನಾಮ ರೆಡ್‌, ಮಳೆ ದಿನದ ಸ್ತ್ರೀ, ಕತ್ತಲೆ, ಹೊಗೆ, ಟೆಕ್ಸಸ್‌ ಟೀ ಮುಂತಾದ ಹೆಸರಿನಿಂದ ಗುರುತಿಸಲಾಗುತ್ತದೆ.

ಬಿಳಿ ಹುಡುಗಿಯ ಕರಾಳ ಮುಖ:

ಇದರ ಚಟಕ್ಕೆ ಬಿದ್ದವರು ತಮ್ಮ ದೇಹ ಪ್ರಕೃತಿಯನ್ನು ಹಾಳು ಮಾಡಿಕೊಂಡು ಅನೇಕ ರೋಗಗಳ ಬೆಳವಣಿಗೆಗೆ ಆಸ್ಪದ ಮಾಡಿಕೊಡುತ್ತಾರೆ. ತಮ್ಮ ಜೀವನ ನಿರುತ್ಸಾಹಕರ, ಭವಿಷ್ಯ ಕರಾಳವೆಂದು ಅವುಗಳ ಸೇವನೆಯನ್ನು ಬಿಡದ ಮುಂದುವರಿಸಿ ತಮ್ಮ ಅಂತ್ಯದತ್ತ ಹೆಜ್ಜೆ ಹಾಕುತ್ತಾರೆ. ಬಾಯಿಯಿಂದ ಸೇವಿಸಬಲ್ಲ, ಹೊಗೆಯಾಗಿ ಒಳಕ್ಕೆಳೆದುಕೊಳ್ಳಬಲ್ಲ, ನಶ್ಯದಂತೆ ಮೂಗಿನಲ್ಲಿ ಏರಿಸಬಲ್ಲ ಮತ್ತು ದೇಹಕ್ಕೆ ಚುಚ್ಚಿಕೊಳ್ಳಬಲ್ಲ ಬಾರ್ಬಿಚುರೇಟ್‌ ನಂತಹ ನಿದ್ರಾಜನ್ಯ ಗುಳಿಗೆಗಳು ನರಮಂಡಲದ ಮೇಲೆ ಪ್ರಭಾವಬೀರಿ ಉಸಿರಾಟವನ್ನು ಮಂದಗೊಳಿಸುತ್ತದೆ. ಕೆನಾಬಿಸ್‌, ಇಂಡಿಕಾ ಸಸ್ಯ ನೀಡುವ ಗಾಂಜಾ, ಮಾರಿಯಾನಾ, ಹಾಶ್‌ಹಿಶ್‌, ಚರಸ್‌ ಹಸಿವು ಬಾಯಾರಿಕೆ ಹಿಂಗಿಸಿ ವ್ಯಕ್ತಿಯನ್ನು ನಿದ್ರಾ ಸ್ಥಿತಿಗೊಯ್ಯತ್ತದೆ. ಮಾತ್ರವಲ್ಲ ದೃಷ್ಟಿನಿಷ್ಟೇಜವಾಗಿ ನಿಶಕ್ತಿ ಹೆಚ್ಚುವುದು. ಮನೋವಿಕಲ್ಪತೆ ತೋರಿ ವ್ಯಕ್ತಿತ್ವ ಬದಲುಗೊಂಡು ಅಸಿಂಧುವೆನಿಸಿದ ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಾರೆ. ಮಾದಕ ದ್ರವ್ಯಗಳ ಸೇವನೆ ಆರಂಭದಲ್ಲಿ ಉದ್ರೇಕ, ಸ್ವಪ್ನ ಲೋಕದಲ್ಲಿ ವಿಹರಿಸುವ ಭಾವನೆ ಕಂಡುಬಂದರೂ ನಂತರ ನರಕೇಂದ್ರಗಳು ಕುಗ್ಗಿ ಮಂಪರು, ತಲೆನೋವು, ವಾಕರಿಕೆ, ವಾಂತಿ, ಸುಸ್ತು, ನಿದ್ದೆ, ಕೊನೆಗೆ ಶರೀರ ಜಡವಾಗುವುದು. ಮಾದಕ ದ್ರವ್ಯದ ದಾಸರಾಗಿ, ನಿರಾಸಕ್ತರಾಗಿ, ಸಮಾಜದ ನೀತಿ ನಿಯಮಗಳನ್ನು ಉಪೇಕ್ಷಿಸಿ, ದೇಹ ಕ್ಷೀಣಿಸಿ, ಸೋಂಕು ರೋಗಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ.

ಮಾದಕ ದ್ರವ್ಯದ ವಿರುದ್ಧ ಜಾಗೃತಿ ಅಭಿಯಾನ ಅಗತ್ಯ:

ವ್ಯಕ್ತಿಯೊಬ್ಬನಲ್ಲಿ ಚಟವಾಗಿ ಬೇರೂರಿದ ಮಾದಕ ದ್ರವ್ಯಗಳ ಸೇವನೆಯನ್ನು ಗುಣಪಡಿಸುವುದು ಕಠಿಣ ಮತ್ತು ಪರಿಶ್ರಮದ ಕೆಲಸ. ರೋಗಿ ಮತ್ತು ಕುಟುಂಬ ವರ್ಗದ ಸಹಕಾರ ತುಂಬಾ ಅಗತ್ಯ. ದೈಹಿಕವಾಗಿ ದುರ್ಬಲರಾಗಿರುವ ವ್ಯಸನಿಗಳಿಗೆ ಪುಷ್ಟಿಕರ ಆಹಾರ ಕೊಡುವುದು ಅತ್ಯಗತ್ಯ. ಅವರಲ್ಲಿನ ಕೀಳರಿಮೆ ಅಪರಾಧ ಮನೋವೃತ್ತಿಯನ್ನು ಹೋಗಲಾಡಿಸಬೇಕು. ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಕೂಲ ವಾತಾವಣ ನಿರ್ಮಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ.

ನೀವು ಕೈಜೋಡಿಸಿ..

ಪುತ್ತೂರಿನ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅ.30ರಂದು ಬೃಹತ್‌ ನಡಿಗೆ ಕಾರ್ಯಕ್ರವನ್ನು ಆಯೋಜಿಸಲಾಗಿದೆ. ಮಾತ್ರವಲ್ಲದೆ, ಎಸ್‌ ಕೆ ಎಸ್‌ ಎಸ್‌ ಎಫ್‌ ಕನ್ನಡ ರಾಜ್ಯೋತ್ಸವದಂದು ಮಾದಕ ವ್ಯಸನದ ವಿರುದ್ದ ಜನಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ ಎಂಬ ಕವಿವಾಣಿಯನ್ನು ಪುತ್ತೂರಿನ ಜನತೆ ಮಾದಕ ವ್ಯಸನಿಗಳಿಗೆ ತಿಳಿ ಹೇಳಬೇಕಾದ ಪರ್ವಕಾಲ ಇದಾಗಿದೆ. ಮಾದಕ ದ್ರವ್ಯದ ವಿರುದ್ದ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಪಶ್ಛಾತಾಪ ಪಡಬೇಕಾಗಿ ಬರಬಹುದು.

LEAVE A REPLY

Please enter your comment!
Please enter your name here