ಮಂಗಳೂರು(ದಿಬ್ರುಗಡ್): ಅಸ್ಸಾಂ ನ ದಿಬ್ರುಗಢ ಮೂಲದ ಕಿಶನ್ ಬಗಾರಿಯಾ ಎಂಬ ಯುವಕ ತನ್ನ ಮೆಸೇಜಿಂಗ್ ಆ್ಯಪ್ ಮೂಲಕ ದೇಶ ಮಾತ್ರವಲ್ಲದೇ ಜಗತ್ತಿನ ಗಮನ ಸೆಳೆದಿದ್ದಾನೆ. ಕಿಶನ್ ರಚನೆ ಮಾಡಿರುವ ಮೆಸೇಜಿಂಗ್ ಆ್ಯಪ್ ಅನ್ನು ಅಮೆರಿಕಾದ ಕಂಪನಿಯೊಂದು ಬರೋಬ್ಬರಿ 50 ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿದೆ. ಭಾರತೀಯ ರೂಪಾಯಿಗೆ ಹೋಲಿಕೆ ಮಾಡಿದರೆ, ಇದರ ಮೌಲ್ಯ ಸರಿಸುಮಾರು 416 ಕೋಟಿ ರೂಪಾಯಿ.
ಕಿಶನ್ ಬಗಾರಿಯಾ ಟೆಕ್ಸ್ಟ್ ಡಾಟ್ ಕಾಮ್ ಎಂಬ ಮೆಸೇಜಿಂಗ್ ಆ್ಯಪ್ ಸೃಷ್ಟಿ ಮಾಡಿದ್ದಾನೆ. ಇದು ವಿವಿಧ ಸಾಮಾಜಿಕ ಮಾಧ್ಯಮ ಆ್ಯಪ್ ಗಳ ಮೆಸೇಜ್ ಗಳನ್ನು ಒಂದೇ ಪ್ಲಾಟ್ ಫಾರ್ಮ್ ಮೂಲಕ ರವಾನಿಸುವ ಅಪ್ಲಿಕೇಶನ್ ಆಗಿದೆ. ಅಮೆರಿಕದ ಟೆಕ್ ದೈತ್ಯ ಆಟೋಮ್ಯಾಟಿಕ್ ಕಂಪನಿ ಇದನ್ನು ಖರೀದಿ ಮಾಡಿದೆ. ಆ್ಯಪ್ ಅನ್ನು ಖರೀದಿಸಿರುವುದು ಮಾತ್ರವಲ್ಲದೇ, ಟೆಕ್ಸ್ಟ್ ಡಾಟ್ ಕಾಮ್ ಕಂಪೆನಿಯ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕಿಶನ್ ಅವರಿಗೆ ಕಂಪನಿಯು ಕೇಳಿಕೊಂಡಿದೆ. ಕಿಶನ್ ನ ಈ ಟೆಕ್ಸ್ಟ್ ಡಾಟ್ ಕಾಮ್ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳಾದ ಇನ್ ಸ್ಟಾಗ್ರಾಮ್, ಎಕ್ಸ್, ಮೆಸೇಂಜರ್, ವಾಟ್ಸಾಪ್ ಹಾಗೂ ಇತ್ಯಾದಿ ಆ್ಯಪ್ ಗಳನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ.