ಮಂಗಳೂರು(ಹೈದರಾಬಾದ್): ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವು ದಿನಗಳು ಬಾಕಿ ಉಳಿದಿದ್ದು, ಹಣ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜಧಾನಿ ಹೈದರಾಬಾದಿನಲ್ಲಿ ನ.18ರಂದು ಆರು ಕಾರುಗಳಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ನೋಟುಗಳ ಮೌಲ್ಯ ಬರೋಬ್ಬರಿ 7.40 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಔಟರ್ ರಿಂಗ್ ರೋಡಿನ ಎಪಿಪಿಎ ಸರ್ಕಲ್ ಬಳಿ ವಾಹನ ತಪಾಸಣೆ ವೇಳೆ ಕಾರುಗಳಲ್ಲಿ ಕೋಟಿಗಟ್ಟಲೆ ನಗದು ಪತ್ತೆಯಾಗಿದೆ. ಬ್ಯಾಗ್ ಗಳಲ್ಲಿ ತುಂಬಿಸಿಕೊಂಡು ಈ ಹಣ ಸಾಗಿಸಲಾಗುತ್ತಿತ್ತು. ಈ ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇಷ್ಟೊಂದು ನಗದು ಯಾರಿಗೆ ಸೇರಿದ್ದು?, ಯಾರನ್ನಾದರೂ ಬಂಧಿಸಲಾಗಿದೆಯೇ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಕುರಿತು ಹಣವನ್ನು ಸಾಗಿಸುತ್ತಿದ್ದವರನ್ನು ವಿಚಾರಣೆ ನಡೆಸಲಾಗಿದೆ.