ಮಂಗಳೂರು: ಇಂದು ಮಂಗಳೂರಿನಲ್ಲಿ ನಡೆದ ಕೆಯುಐಡಿಎಫ್ ಸಭೆಯಲ್ಲಿ ಕೋಪಗೊಂಡ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಚೀಫ್ ಎಂಜಿನಿಯರ್ ಗೆ ಗೆಟ್ ಔಟ್ ಎಂದ ಘಟನೆ ನಡೆದಿದೆ.
ಇಂದು ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿದ್ಯಾಮಾನ ನಡೆದಿದೆ. ಕಾಮಗಾರಿ ವಿಳಂಬವಾಗಿರುವ ಬಗ್ಗೆ ಚೀಫ್ ಎಂಜಿನಿಯರ್ ಜಯರಾಮ್ ಅವರಲ್ಲಿ ಮಾಹಿತಿ ಕೇಳಿದ ಸಚಿವರು ಕಾಮಗಾರಿಗಳು ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಆಗುತ್ತಾ? ಎಂದು ಚೀಫ್ ಎಂಜಿನಿಯರ್ ಜಯರಾಮ್ ಅವರನ್ನು ಸಚಿವರು ಪ್ರಶ್ನಿಸಿದ್ದಾರೆ. ಸಮರ್ಪಕ ಉತ್ತರ ಸಿಗದೆ ಇದ್ದಾಗ ಗರಂ ಆದ ಸಚಿವರು ಗುತ್ತಿಗೆದಾರರೊಂದಿಗೆ ಕೈಜೋಡಿಸಿದ್ದೀರಾ ಎಂದು ತರಾಟೆಗೆತ್ತಿಕೊಂಡಿದ್ದಾರೆ. ಈ ವೇಳೆ ರಿಸೈನ್ ಮಾಡುವುದಾಗಿ ಚೀಫ್ ಎಂಜಿನಿಯರ್ ಜಯರಾಮ್ ಹೇಳಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಸಚಿವರು ಎಂಜಿನಿಯರ್ ಗೆ ಗೆಟ್ ಔಟ್ ಫ್ರಂ ಹಿಯರ್ ಎಂದು ಹೇಳಿದ್ದಾರೆ. ಚೀಫ್ ಎಂಜಿನಿಯರ್ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದಿದ್ದ ಜಯರಾಮ್ ಸಭೆಯಿಂದ ಹೊರನಡೆದಿದ್ದಾರೆ.