ವೈದ್ಯಕೀಯ ಸೇವೆ ನೀಡುವ ಎಲ್ಲಾ ಸಂಸ್ಥೆಗಳಿಗೆ ಆರೋಗ್ಯ ಇಲಾಖೆಯ ನೋಂದಣಿ ಕಡ್ಡಾಯ- ಅನಧಿಕೃತ ಕೇಂದ್ರಗಳ ಮೇಲೆ ಕಣ್ಗಾವಲು – ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಮಂಗಳೂರು: ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆ ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ದಂತ ವೈದ್ಯಕೀಯ, ಆಯುಷ್, ಹೋಮಿಯೋಪತಿ, ಫಿಸಿಯೋಥೆರಪಿ, ನ್ಯಾಚುರೋಪತಿ ಸೇರಿದಂತೆ ವೈದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್, ಆಸ್ಪತ್ರೆ ಮತ್ತು ವ್ಯಕ್ತಿಗಳು, ಪ್ರಯೋಗಾಲಯ, ಪರೀಕ್ಷಾ ಕೇಂದ್ರಗಳು, ಅಲ್ಟ್ರಾ ಸೌಂಡ್ ಸಂ‌ಸ್ಥೆಗಳು ಕಡ್ಡಾಯವಾಗಿ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯಿದೆಯಡಿ ನೋಂದಣಿ ಮಾಡಬೇಕಿದೆ. ನೋಂದಣಿ ಆಗದೆ ಕಾರ್ಯನಿರ್ವಹಿಸುವ ಕ್ಲಿನಿಕ್, ಆಸ್ಪತ್ರೆಗಳನ್ನು ಮುಚ್ಚುವ ಎಚ್ಚರಿಕೆ ನೀಡಲಾಗಿದೆ.

ಇನ್ನು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಹೆಸರಿನಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುವ ಕೇಂದ್ರಗಳನ್ನು ಮುಚ್ಚಿಸಲು ಕಾರ್ಯಾಚರಣೆ ನಡೆಸಲಾಗುವುದು. ಲೈಂಗಿಕ ಸಮಸ್ಯೆಗಳ ಚಿಕಿತ್ಸೆಯು ಆರೋಗ್ಯ ವ್ಯವಸ್ಥೆಯಡಿ ಬರುತ್ತದೆ. ಲೈಂಗಿಕ ಸಮಸ್ಯೆಗಳನ್ನು ಪರಿಹರಿಸುವ ಅಥವಾ ಚಿಕಿತ್ಸೆ ನೀಡುವ ಕೇಂದ್ರಗಳು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿಗೊಳ್ಳಬೇಕಿದ್ದು, ಚಿಕಿತ್ಸೆ ನೀಡುವ ವೈದ್ಯರು ಅರ್ಹತೆ ಹೊಂದಿದವರಾಗಿರಬೇಕು ಹಾಗೂ ಅನಧಿಕೃತವಾಗಿ ಲೈಂಗಿಕ ಚಿಕಿತ್ಸೆ ಕೊಡುವವರಿಗೆ ಅವಕಾಶವಿಲ್ಲ ಎಂದು ಹೇಳಲಾಗಿದೆ.

ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳು ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ಲೈಸೆನ್ಸ್ ಪಡೆದಿರಬೇಕು. ಸ್ಕ್ಯಾನಿಂಗ್ ಸೆಂಟರ್ ಗಳು ಹೊಸ ಯಂತ್ರ ಖರೀದಿಸಲು ಮತ್ತು ಹಳೆ ಯಂತ್ರ ಬದಲಾಯಿಸಲು ಇಲಾಖೆಯ ಅನುಮತಿ ಪಡೆದಿರಬೇಕು ಎಂದು ಜಿಲ್ಲಾ ಪ್ರಭಾರ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ. ಜನನ ಪೂರ್ವ ಲಿಂಗ ಪತ್ತೆ ನಡೆಸಲು ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಅವಕಾಶವಿಲ್ಲ, ಭ್ರೂಣ ಲಿಂಗ ಪತ್ತೆ ನಡೆಸಿದರೆ ಅಂತಹ ಸೆಂಟರ್ ಮೇಲೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here