ಮಂಗಳೂರು(ಹೈದರಾಬಾದ್): ನ.30ರಂದು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶ ಸರಕಾರವು ನಾಗಾರ್ಜುನ ಸಾಗರ ಅಣೆಕಟ್ಟಿನ ಅರ್ಧ ಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇದರಿಂದ ಆಕ್ರೋಶಿತಗೊಂಡಿರುವ ತೆಲಂಗಾಣ ಸರಕಾರವು ಆಂಧ್ರಪ್ರದೇಶದ ಈ ಕ್ರಮದ ವಿರುದ್ಧ ಕೃಷ್ಣಾ ನದಿ ನಿರ್ವಹಣೆ ಮಂಡಳಿಗೆ ದೂರನ್ನು ಸಲ್ಲಿಸಿದೆ.
ಮತದಾನದ ಸಂದರ್ಭದಲ್ಲಿ ಯಾವುದೇ ಅಪಾಯಗಳನ್ನು ಎದುರಿಸಲು ಸಜ್ಜಾಗಿದ್ದ ತೆಲಂಗಾಣ ಪೋಲಿಸರು ನ.29ರ ರಾತ್ರಿ ಒಂದು ಗಂಟೆಯ ಸುಮಾರಿಗೆ ಆಂಧ್ರಪ್ರದೇಶದ ಸುಮಾರು 400 ಪೋಲಿಸರು ರಾಜ್ಯ ನೀರಾವರಿ ಅಧಿಕಾರಿಗಳೊಂದಿಗೆ ಅಣೆಕಟ್ಟು ಪ್ರದೇಶಕ್ಕೆ ನುಗ್ಗಿದಾಗ ಅನಿರೀಕ್ಷಿತ ಭದ್ರತಾ ಉಲ್ಲಂಘನೆ ಎದುರಿಸಿದ್ದರು. ಅಣೆಕಟ್ಟಿನ ಒಟ್ಟು 26 ಗೇಟುಗಳ ಪೈಕಿ ಸಂಖ್ಯೆ 14ರಿಂದ 26ವರೆಗಿನ ಗೇಟುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಆಂಧ್ರಪ್ರದೇಶವು ಸಂಖ್ಯೆ 1ರಿಂದ 13ರವರೆಗಿನ ಗೇಟುಗಳನ್ನು ತೆಲಂಗಾಣಕ್ಕೆ ಬಿಟ್ಟಿದೆ. ಅಣೆಕಟ್ಟನ್ನು ಭಾಗಶಃ ನಿರ್ಬಂಧಿಸಿದ ಬಳಿಕ ಆಂಧ್ರ ಪ್ರದೇಶ ನೀರಾವರಿ ಅಧಿಕಾರಿಗಳು ತಮ್ಮ ರಾಜ್ಯಕ್ಕೆ ನೀರನ್ನು ಬಿಡುಗಡೆಗೊಳಿಸಿದ್ದಾರೆ.
ತೆಲಂಗಾಣ ಅಧಿಕಾರಿಗಳಿಗೆ ಅತಿಕ್ರಮಣದ ಬಗ್ಗೆ ಮಾಹಿತಿ ಲಭಿಸಿದಾಗ ನಲ್ಗೊಂಡಾದಿಂದ ಕೆಲವು ಪೋಲಿಸರು ಅಣೆಕಟ್ಟು ಸ್ಥಳಕ್ಕೆ ಧಾವಿಸಿದ್ದು,ಆಂಧ್ರ ಪ್ರದೇಶದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಆದರೆ ಸರಕಾರದ ನಿರ್ದೇಶನದ ಮೇರೆಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವುದಾಗಿ ಆಂಧ್ರ ಪ್ರದೇಶ ಅಧಿಕಾರಿಗಳು ಹೇಳಿದ ಬಳಿಕ ತೆಲಂಗಾಣ ಪೋಲಿಸ್ ಅಧಿಕಾರಿಗಳು ಸ್ಥಳದಿಂದ ವಾಪಸಾಗಿದ್ದರು. ಅಣೆಕಟ್ಟಿನ ಬಲ ಕಾಲುವೆ ಕಾರ್ಯಾಚರಣೆಗೆ ತೆರಳುವ ಎಲ್ಲ ಪ್ರವೇಶ ತಾಣಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಆಂಧ್ರಪ್ರದೇಶ ಪೋಲಿಸರು ಮುಳ್ಳುತಂತಿಯ ಬೇಲಿಗಳನ್ನು ಅಳವಡಿಸಿದ್ದರು. ತೆಲಂಗಾಣದ ವಾಹನಗಳನ್ನೂ ನಿರ್ಬಂಧಿಸಿದ್ದರು. ಘಟನೆಯ ಬಗ್ಗೆ ತಾವು ಯಾವುದೇ ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ತೆಲಂಗಾಣ ಪೋಲಿಸರು ತಿಳಿಸಿದ್ದಾರೆ. ವಿವಾದವು ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಅಣೆಕಟ್ಟು ಪ್ರದೇಶದಲ್ಲಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಲ್ಗೊಂಡಾ ಜಿಲ್ಲಾ ಪೋಲಿಸರ ಪ್ರಕಾರ,ತೆಲಂಗಾಣ ನೀರಾವರಿ ಇಲಾಖೆಯ ಅಧಿಕಾರಿಗಳು ನಾಗಾರ್ಜುನ ಸಾಗರ ಅಣೆಕಟ್ಟಿನ ಕಾರ್ಯಾಚರಣೆ ನಿಯಂತ್ರಣವನ್ನು ಹೊಂದಿದ್ದು,ತೆಲಂಗಾಣ ವಿಶೇಷ ರಕ್ಷಣಾ ಪಡೆಯು ರಕ್ಷಣೆಯ ಜವಾಬ್ದಾರಿ ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಶ್ರೀಶೈಲಂ ಅಣೆಕಟ್ಟಿನ ಕಾರ್ಯಾಚರಣೆ ಆಂಧ್ರಪ್ರದೇಶ ಅಧಿಕಾರಿಗಳ ನಿಯಂತ್ರಣದಲ್ಲಿದೆ. 2015, ಫೆ.13ರಂದು ಅಣೆಕಟ್ಟಿಗೆ ನುಗ್ಗಲು ಆಂಧ್ರಪ್ರದೇಶ ಪೋಲಿಸರು ಇಂತಹುದೇ ಪ್ರಯತ್ನವನ್ನು ನಡೆಸಿದ್ದರು. ಆದರೆ ತೆಲಂಗಾಣದ ಗ್ರೇಹೌಂಡ್ ಪಡೆಗಳು ಸ್ಥಳಕ್ಕೆ ಧಾವಿಸಿ ಅದನ್ನು ವಿಫಲಗೊಳಿಸಿದ್ದವು. ಆಗ ಉಭಯ ರಾಜ್ಯಗಳ ಪೋಲಿಸರ ನಡುವೆ ಘರ್ಷಣೆ ನಡೆದಿತ್ತು. ಪ್ರತ್ಯೇಕ ತೆಲಂಗಾಣ ಅಸಿತ್ವಕ್ಕೆ ಬಂದಾಗಿನಿಂದಲೂ ಉಭಯ ರಾಜ್ಯಗಳು ನೀರು ಹಂಚಿಕೆ ವಿವಾದದಲ್ಲಿ ಸಿಲುಕಿಕೊಂಡಿವೆ. ಈ ನಡುವೆ ಮಧ್ಯಪ್ರವೇಶಿಸುವಂತೆ ಮತ್ತು ವಿವಾದವನ್ನು ಬಗೆಹರಿಸುವಂತೆ ಆಂಧ್ರಪ್ರದೇಶದ ಅಧಿಕಾರಿಗಳು ಕೆಆರ್ ಎಂಬಿಯನ್ನು ಕೋರಿಕೊಂಡಿದ್ದಾರೆ.