ಖಾಸಗಿ ಡೇರಿಗಳ ಹಾಲಿನಲ್ಲಿ ಕಲಬೆರಕೆ-ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ  ವರದಿಯಲ್ಲಿ ಬಹಿರಂಗ

ಮಂಗಳೂರು(ಬೆಂಗಳೂರು): ರಾಜ್ಯದ ಮಾರುಕಟ್ಟೆಗೆ ಪೂರೈಕೆಯಾಗುವ ಬಹುತೇಕ ಖಾಸಗಿ ಬ್ರ್ಯಾಂಡ್‌’ಗಳ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳಿವೆ ಮತ್ತು ಆ ಹಾಲು ಕಲಬೆರಕೆಯಾಗಿದೆ ಎಂಬ ಸಂಗತಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಜತೆಗೆ, ಖಾಸಗಿ ಡೇರಿಗಳು ಸೇವಿಸಲು ಯೋಗ್ಯವಲ್ಲದ ಹಾಲನ್ನು ಮಾರಾಟ ಮಾಡುತ್ತಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ದೂರು ಕೇಳಿಬಂದ ಹಿನ್ನೆಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ 31 ಜಿಲ್ಲೆಗಳಲ್ಲಿನ 44 ಖಾಸಗಿ ಬ್ರಾಂಡ್‌ ಗಳ ಮತ್ತು ರಾಜ್ಯದ ‘ನಂದಿನಿ’ ಬ್ರಾಂಡ್ ಹಾಲಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಏಪ್ರಿಲ್‌ ತಿಂಗಳಿಂದ ರಾಜ್ಯದ ಉದ್ದಗಲಕ್ಕೂ ನಿಯಮಿತವಾಗಿ ಖಾಸಗಿ ಮತ್ತು ನಂದಿನಿ ಬ್ರಾಂಡಿನ ಹಾಲಿನ ಮಾದರಿಗಳನ್ನು ಸಂಗ್ರಹಿಸಿತ್ತು. ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ದಿನದಂದು 259 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಕೆಎಂಎಫ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ಎಲ್ಲಾ ಮಾದರಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ.

ಖಾಸಗಿ ಬ್ರಾಂಡ್‌ಗಳ ಹಾಲಿನಲ್ಲಿ ಮೂರು ಮಾದರಿಗಳು ಕಲಬೆರಕೆಯಾಗಿವೆ. 98 ಮಾದರಿಗಳ ಹಾಲಿನ ಗುಣಮಟ್ಟ ಕಳಪೆಯಾಗಿದೆ. 9 ಮಾದರಿಗಳು ಕಲಬೆರಕೆಯಾಗಿವೆ ಮತ್ತು ಗುಣಮಟ್ಟ ಕಳಪೆಯಾಗಿದೆ. 110 ಮಾದರಿಗಳ ಗುಣಮಟ್ಟವು ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ ರೆಗ್ಯೂಲೇಷನ್ ಆ್ಯಕ್ಟ್‌ ನ ಮಾನದಂಡಕ್ಕೆ ಅನುಗುಣವಾಗಿಲ್ಲ. 149 ಮಾದರಿಗಳ ಗುಣಮಟ್ಟವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಮಾನದಂಡಕ್ಕೆ ಅನುಗುಣವಾಗಿದೆ ಎಂಬ ಅಂಶಗಳು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮೂಲಗಳು ತಿಳಿಸಿವೆ. ಆದರೆ, ನಂದಿನಿ ಬ್ರ್ಯಾಂಡಿನ ಹಾಲು ಗುಣಮಟ್ಟದಿಂದ ಕೂಡಿದೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಮಾನದಂಡಕ್ಕೆ ಅನುಗುಣವಾಗಿದೆ ಹಾಗೂ ನಂದಿನಿ ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಯಾವ ಬ್ರಾಂಡಿನ ಹಾಲುಗಳು ಕಲಬೆರಕೆಯಿಂದ ಕೂಡಿದೆ ಎನ್ನುವ ಬಗ್ಗೆ  ಪ್ರಾಧಿಕಾರ ಮಾಹಿತಿ ನೀಡಿಲ್ಲ.

LEAVE A REPLY

Please enter your comment!
Please enter your name here