ಮಂಗಳೂರು(ಬೆಂಗಳೂರು): ರಾಜಧಾನಿಯ ಒಟ್ಟು 12 ಕಡೆಗಳಲ್ಲಿ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗಿನ ಜಾವ ದಾಳಿ ನಡೆದಿದ್ದು, ಶಂಕಿತ ಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ನಗರದಲ್ಲಿ ಬಂಧನವಾಗಿದ್ದ ಐವರು ಶಂಕಿತ ಉಗ್ರರ ಪ್ರಕರಣಕ್ಕೆ ಸಂಬಂಧಿಸಿ ದಾಳಿಗಳು ನಡೆದಿವೆ. ಮುದಾಸಿರ್, ಜಾಹಿದ್, ತಬ್ರೇಜ್ ಮಹಮದ್ ಉಮರ್ ಸೇರಿ 5 ಜನರನ್ನು ಬಂಧಿಸಲಾಗಿತ್ತು. ಹೆಬ್ಬಾಳ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಸಿಸಿಬಿ ಅಧಿಕಾರಿಗಳು ಜುಲೈ 1ರಂದು ದಾಳಿ ಮಾಡಿದ್ದರು. ಈ ವೇಳೆ 7 ಪಿಸ್ತೂಲ್, 45 ಗುಂಡುಗಳು, ಗ್ರೇನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ಎನ್ ಐಎ ಇಂದು ನಡೆಸಿರುವ ದಾಳಿಯಲ್ಲಿ ಆರು ಕಡೆ ಮನೆಗಳ ಪರಿಶೀಲನೆ ಮಾಡಿ ಕೆಲವರ ವಿಚಾರಣೆ ನಡೆಸಿದೆ. ಸದ್ಯ ಯಾರನ್ನೂ ಬಂಧಿಸಿಲ್ಲ.