ಮಂಗಳೂರು(ಬೆಂಗಳೂರು): 18 ವರ್ಷಗಳ ಹಿಂದೆ ಯುದ್ಧದ ಸಂದರ್ಭ ಯೆಮೆನ್ ಮೂಲದ ವ್ಯಕ್ತಿಯೊಬ್ಬನ ತಲೆಗೆ ಹೊಕ್ಕಿದ್ದ ಬುಲೆಟನ್ನು ಬೆಂಗಳೂರಿನ ಆರ್.ವಿ.ಆಸ್ಟರ್ ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯೆಮೆನ್ ಮೂಲದ 28 ವರ್ಷದ ವ್ಯಕ್ತಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. 12 ವರ್ಷದ ಬಾಲಕನಾಗಿದ್ದ ನಡೆದ ಯುದ್ದದ ಸಂದರ್ಭದಲ್ಲಿ ಈ ಬಾಲಕನ ತಲೆಗೆ ಬುಲೆಟ್ ಹೊಕ್ಕಿತ್ತು. ಈ ಬುಲೆಟ್ ಸ್ಕಲ್ ಬೋನ್ ಒಳಗೆ ನುಸುಳಿ ಕಿವಿಗೆ ಹೊಕ್ಕಿತ್ತು ಎನ್ನಲಾಗಿದೆ. ಇದರಿಂದಾಗಿ ಕಿವಿ ಸೋರುವಿಕೆ, ತಲೆನೋವು, ಕಿವಿನೋವು ಸಮಸ್ಯೆಯಿಂದ ಬಳಲುವಂತಾಗಿತ್ತು. ಸ್ನೇಹಿತರ ಜೊತೆ ಸೇರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಯುವಕ ವೈದ್ಯರ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ಅದರಂತೆ ವೈದ್ಯರು ಎಕ್ಸ್ರೇ ತೆಗೆದು ನೋಡಿದಾಗ ಬುಲೆಟ್ ಕಾಣಿಸಿಕೊಂಡಿದೆ. ಶಸ್ತ್ರಚಿಕಿತ್ಸೆ ಸವಾಲಿನದ್ದಾಗಿದ್ದು, ರಕ್ತಸ್ರಾವ ಉಂಟಾಗಬಹುದು ಎಂಬ ಅರಿವಿದ್ದರೂ ವೈದ್ಯರು ಸವಾಲು ಸ್ವೀಕರಿಸಿ ಶಸ್ತ್ರಚಿಕಿತ್ಸೆ ನಡೆಸಿ 3 ಸೆಂಟಿಮೀಟರ್ ಉದ್ದದ ಬುಲೆಟ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ರೋಗಿ ಸಂಪೂರ್ಣ ಗುಣಮುಖನಾಗಿದ್ದು ಯೆಮೆನ್ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.