ಮಧುಮೇಹಿಗಳಿಗಾಗಿ ಹೊಸ ತಳಿ ಅಕ್ಕಿ-ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕುಣಿಗಲ್‌ ನಲ್ಲಿ ಪ್ರಾಯೋಗಿಕ ಬೆಳೆ-ಬೊಜ್ಜು ಕರಗಿಸಲು ನೆರವಾಗುವ ಆರ್‌ಎನ್‌ಆರ್–15048 ಭತ್ತದ ತಳಿ

ಮಂಗಳೂರು(ತುಮಕೂರು): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಆರ್‌ಎನ್‌ಆರ್–15048’ ಎಂಬ ಭತ್ತದ ತಳಿಯನ್ನು ಪರಿಚಯಿಸಲಾಗಿದ್ದು, ಬಿಳಿ ಅಕ್ಕಿ ಅನ್ನ ಕಂಡರೆ ಭಯಬೀಳುವ ಮಧುಮೇಹಿಗಳಿಗಾಗಿ ಸಕ್ಕರೆ ಅಂಶ ಕಡಿಮೆ ಇರುವ ಭತ್ತವನ್ನು ಈಗ ರಾಜ್ಯದ ರೈತರು ಬೆಳೆಯಲು ಆರಂಭಿಸಿದ್ದಾರೆ.

ಸೋನಾ ಮಸೂರಿ ಸೇರಿದಂತೆ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಈ ಅಕ್ಕಿ ಕಡಿಮೆ ‘ಗ್ಲೈಸಿಮಿಕ್ ಇಂಡೆಕ್ಸ್’ ಹೊಂದಿದೆ. ಇತರ ತಳಿಯ ಅಕ್ಕಿ ಸಾಮಾನ್ಯವಾಗಿ ಶೇ 56.5ರಷ್ಟು ಜಿ.ಐ ಹೊಂದಿದ್ದರೆ, ಈ ತಳಿಯ ಅಕ್ಕಿ ಶೇ 51.5ರಷ್ಟು ಹೊಂದಿದೆ. ರಾಗಿ ಹಾಗೂ ಸಿರಿ ಧಾನ್ಯಗಳ ರೀತಿಯಲ್ಲಿಯೇ ಆರ್‌ಎನ್‌ಆರ್–15048 ಭತ್ತದ ತಳಿಯ ಅಕ್ಕಿಯು ನಿಧಾನವಾಗಿ ದೇಹಕ್ಕೆ ಸಕ್ಕರೆ ಅಂಶ ಬಿಡುಗಡೆ ಮಾಡುವ ವಿಶೇಷ ಗುಣ ಹೊಂದಿದೆ. ಆರ್‌ಎನ್‌ಆರ್ ತಳಿಯ ಭತ್ತದಿಂದ ತಯಾರಿಸಿದ ಅಕ್ಕಿಯು ಸೋನಾ ಮಸೂರಿಯಂತೆ ಗಾತ್ರದಲ್ಲಿ ಸಣ್ಣ ಹಾಗೂ ರುಚಿ, ಸ್ವಾದ ಹೊಂದಿದೆ. ಮಧುಮೇಹಿಗಳಿಗೆ ಅನುಕೂಲಕರವಾಗುವುದರ ಜೊತೆಗೆ, ಬೊಜ್ಜು ಕರಗಿಸಲೂ ಸಹಕಾರಿಯಾಗಲಿದೆ. ರಾಗಿ, ಇತರ ಕಿರು ಧಾನ್ಯಗಳ ಆಹಾರ ಬಳಸಿದಂತೆ ಈ ಅಕ್ಕಿಯಿಂದ ತಯಾರಿಸಿದ ಅನ್ನ ಸೇವಿಸಬಹುದು.

ತಿಪಟೂರು ತಾಲ್ಲೂಕು ಕೊನೆಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರಾಜ್ಯದಲ್ಲಿ ಈ ಭತ್ತದ ತಳಿಯನ್ನು ಪರಿಚಯಿಸಿದ್ದು, ಕುಣಿಗಲ್ ತಾಲ್ಲೂಕಿನ ರೈತರು ಬೆಳೆದಿದ್ದಾರೆ. ಮಧುಮೇಹ ಇರುವ
ವರಿಗಾಗಿಯೇ ಹೊಸ ತಳಿಯ ಭತ್ತವನ್ನು ಸಂಶೋಧಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಈ ಭತ್ತದ ತಳಿಯನ್ನು ಮೊದಲಿಗೆ ಪರಿಚಯಿ ಸಲಾಗಿತ್ತು. ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬೆಳೆಸಲಾಗಿದೆ. ಕುಣಿಗಲ್ ಭಾಗದ 15 ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದೆ. ಹೊಸ ತಳಿಯ ಭತ್ತ ಅಲ್ಪಾವಧಿ ಬೆಳೆಯಾಗಿದ್ದು, 125 ದಿನಗಳಿಗೆ ಕೊಯ್ಲು ಮಾಡಬಹುದು. ಇದು ಬೆಂಕಿರೋಗ ನಿರೋಧಕ ಶಕ್ತಿ ಹೊಂದಿದ್ದು, ನೀರಾವರಿ, ಅರೆನೀರಾವರಿ ಪ್ರದೇಶದಲ್ಲಿ ಬೆಳೆಸಬಹುದಾಗಿದೆ. ಏರೋಬಿಕ್ ಪದ್ಧತಿಯನುಸಾರ ವಾರದಲ್ಲಿ ಒಂದೆರಡು ದಿನ ನೀರು ಹಾಯಿಸಿ ಬೆಳೆ ಬೆಳೆಯಲು ಸಾಧ್ಯವಿದೆ. ಎಕರೆಗೆ 26ರಿಂದ 28 ಕ್ವಿಂಟಲ್‌ ಇಳುವರಿ ಬರುವ ಈ ಭತ್ತದಲ್ಲಿ ಒಂದು ಕ್ವಿಂಟಲ್ ಭತ್ತಕ್ಕೆ 68ರಿಂದ 70 ಕೆ.ಜಿ ಅಕ್ಕಿ ಲಭ್ಯವಾಗುತ್ತದೆ.

LEAVE A REPLY

Please enter your comment!
Please enter your name here