ಮಂಗಳೂರು(ಪುತ್ತೂರು): ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ ಪವಿತ್ರ ಹಜ್ ನಿರ್ವಹಿಸಲು ಕಾಲ್ನಡಿಗೆಯ ಯಾತ್ರೆ ಹೊರಟಿರುವ ಅಬ್ದುಲ್ ಖಲೀಲ್ (ನೌಶಾದ್ ಬಿಕೆಎಸ್) ಸದ್ಯ ಸೌದಿ ಅರೇಬಿಯಾದ ರಿಯಾದ್ ತಲುಪಿದ್ದಾರೆ. ಇನ್ನೊಂದು ತಿಂಗಳೊಳಗೆ ಅವರು ಮಕ್ಕಾ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಬ್ದುಲ್ ಖಲೀಲ್‌ಗೆ ಇನ್ನೂ ಹಜ್ ವೀಸಾ ಲಭಿಸಿಲ್ಲ. ಕಾಲ್ನಡಿಗೆಯ ಯಾತ್ರೆಯ ಮಧ್ಯೆಯೇ ಹಜ್ ವೀಸಾಕ್ಕೆ ಪ್ರಯತ್ನ ಮುಂದುವರಿಸಿರುವ ಅಬ್ದುಲ್ ಖಲೀಲ್, ಈ ನಿಟ್ಟಿನಲ್ಲಿ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಪೆರಿಯಡ್ಕದ ಮುಹಮ್ಮದ್ ಬಿ. ಮತ್ತು ನಫೀಸಾ ದಂಪತಿಯ ಆರು ಮಂದಿ ಪುತ್ರರ ಪೈಕಿ 5ನೆಯವನಾದ ಅಬ್ದುಲ್ ಖಲೀಲ್, ಸುಮಾರು 8 ಸಾವಿರಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಮಕ್ಕಾಕ್ಕೆ ತೆರಳಿ ಹಜ್ ನಿರ್ವಹಿಸುವ ಸಂಕಲ್ಪದೊಂದಿಗೆ 2023ರ ಜನವರಿ 30ರಂದು ತನ್ನ ಮನೆಯಿಂದ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದರು. 25ರ ಹರೆಯದ ಅಬ್ದುಲ್ ಖಲೀಲ್ ಅವಿವಾಹಿತರಾಗಿದ್ದು 2021ರಲ್ಲಿ ಕಾಲ್ನಡಿಗೆಯಲ್ಲೇ ಅಜ್ಮೀರ್, ಕಾಶ್ಮೀರಕ್ಕೆ ಹೋಗಿ ಬಂದಿದ್ದರು. ಅಬ್ದುಲ್ ಖಲೀಲ್ ಪವಿತ್ರ ಹಜ್ ಕರ್ಮವನ್ನು ಕಾಲ್ನಡಿಗೆಯ ಮೂಲಕ ನಿರ್ವಹಿಸಬೇಕು ಎಂಬ ಅಭಿಲಾಷೆಯನ್ನು ತನ್ನ ಹೆತ್ತವರು, ಸಹೋದರರ ಜೊತೆ ವ್ಯಕ್ತಪಡಿಸಿ ಮನೆಯವರ ಒಪ್ಪಿಗೆ ಲಭಿಸಿದೊಡನೆ ಅದಕ್ಕೆ ಬೇಕಾದ ಸಿದ್ಧತೆ ಆರಂಭಿಸಿ 2023ರ ಜನವರಿ 30ರಂದು ತನ್ನ ಮನೆಯಿಂದ ಕಾಲ್ನಡಿಗೆಯ ಯಾತ್ರೆ ಆರಂಭಿಸಿದ್ದರು. 2024ರ ಜನವರಿ 30ಕ್ಕೆ ಮಕ್ಕಾ ತಲುಪುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮುನ್ನ ಹಜ್ ವೀಸಾ ಪಡೆಯಲು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್‌ರ ಸಹಕಾರ ಕೋರಿದ್ದಾರೆ.
ಯಾತ್ರೆಯ ವೇಳೆ ಎಲ್ಲೂ ಯಾವುದೇ ಸಮಸ್ಯೆಯಾಗಲಿಲ್ಲ. ಎಲ್ಲರೂ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನನಗೆ ಸರ್ವ ವಿಧದ ಸಹಕಾರ ಸಿಕ್ಕಿದೆ. ಪೊಲೀಸ್ ಅಧಿಕಾರಿಗಳಂತೂ ನಿರೀಕ್ಷೆಗೂ ಮೀರಿ ನನಗೆ ರಕ್ಷಣೆಯ ವ್ಯವಸ್ಥೆ ಮಾಡಿದ್ದರು. ಈವರೆಗೆ ನಾನು ಸುಮಾರು 7,100 ಕಿ.ಮೀ. ಕ್ರಮಿಸಿದ್ದೇನೆ. ದಿನಕ್ಕೆ 25ರಿಂದ 60 ಕಿ.ಮೀ.ವರೆಗೆ ನಡೆದಿರುವೆ. ನಿರ್ಜನ ಪ್ರದೇಶಕ್ಕೆ ರಾತ್ರಿ ತಲುಪಿದಾಗ ಬಸ್ ಪ್ರಯಾಣಿಕರ ತಂಗುದಾಣದಲ್ಲೂ ಮಲಗಿದ್ದೆ. ವಸತಿಗೃಹ, ಮಸೀದಿಯಲ್ಲೂ ತಂಗಿದ್ದೇನೆ. ಇನ್ನು ಸುಮಾರು 900 ಕಿ.ಮೀ. ಕ್ರಮಿಸಲು ಬಾಕಿ ಇದೆ. ತಿಂಗಳೊಳಗೆ ಮಕ್ಕಾ ತಲುಪುವ ವಿಶ್ವಾಸವಿದೆ. ಅದರೊಳಗೆ ಹಜ್ ವೀಸಾ ಲಭಿಸುವ ವಿಶ್ವಾಸವಿದೆ ಎಂದು ಖಲೀಲ್ ಹೇಳಿದ್ದಾರೆ.