ಮಂಗಳೂರು(ಹೊಸದಿಲ್ಲಿ): ರಾಷ್ಟ್ರೀಯ ಕುಸ್ತಿ ಫೆಡರೇಶನ್ ಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಗೆಲುವು ಸಾಧಿಸಿದ ಬೆನ್ನಿಗೆ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ಮಾಡಿದ ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿ ಪ್ರಶಸ್ತಿ ಹಿಂದಿರುಗಿಸಿ ಕುಸ್ತಿಗೆ ವಿದಾಯ ಘೋಷಿಸಿದ್ದರು. ಇದೀಗ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸ ಚುನಾಯಿತ ಸಮಿತಿಯನ್ನು ಅಮಾನತುಗೊಳಿಸಿ ಆದೇಶ ನೀಡಿದೆ. ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಡಿ.24 ರಂದು ಆದೇಶವನ್ನು ಪ್ರಕಟಿಸಿದೆ.
ಕ್ರೀಡಾ ಸಚಿವಾಲಯವು ಅಧಿಕೃತ ಆದೇಶದಲ್ಲಿ, ರಾಷ್ಟ್ರೀಯ ಸ್ಪರ್ಧೆಗಳ ಪ್ರಕಟಣೆಯು ತರಾತುರಿಯಲ್ಲಿತ್ತು ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಹೇಳಿದೆ. ಹೊಸದಾಗಿ ಆಯ್ಕೆಯಾದ ಸಮಿತಿ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿ.21 ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದು, ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.