ಮಂಗಳೂರು: ಎಲ್ಲಾ ಧರ್ಮಕ್ಕೆ ಗೌರವ ಕೊಡುವ ಕಾಂಗ್ರೆಸ್ ನವರು ಒರಿಜಿನಲ್ ಹಿಂದೂಗಳು. ನಿಜವಾದ ರಾಮನ ಭಕ್ತರೆಂದರೆ ನಾವು. ಕರಾವಳಿಯಲ್ಲಿ ಮತ ಬ್ಯಾಂಕ್ ಕಾರಣಕ್ಕೆ ಹಿಂದುತ್ವ ಬಳಕೆ ಮಾಡುತ್ತಿದ್ದಾರೆ. ಮೋದಿ, ನಳಿನ್ ಹಿಂದುತ್ವ ಬಿಟ್ಟು ಬೇರೇನು ಕೆಲಸ ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಅಯೋಧ್ಯೆಗೆ ಹೈಕಮಾಂಡ್ ಹೇಳಿದರೆ ಹೋಗುತ್ತೇವೆ ಎಂದ ಗೃಹಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ನಾವು ಅಯೋಧ್ಯೆಗೂ ಹೋಗುತ್ತೇವೆ, ಮಸೀದಿ, ಚರ್ಚ್, ಬುದ್ಧ ಗಯಾಗೂ ಹೋಗುತ್ತೇನೆ. ದೇವರ ಹೆಸರಲ್ಲಿ ಬಂಗಾರಪ್ಪನ ಮಗನಾಗಿ ರಾಜಕಾರಣ ಮಾಡೋದಿಲ್ಲ. ಕಳೆದ ಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಹಣೆಬರಹ ಬರೆಯೋದು ರಾಜ್ಯದ ಜನತೆ. ಯಡಿಯೂರಪ್ಪ, ನಳಿನ್ ಕಟೀಲ್ ಆಗಲೀ, ಬಿಜೆಪಿಯವರಲ್ಲ. ನಮ್ಮ ಗ್ಯಾರಂಟಿ ಬಗ್ಗೆ ವಿಶ್ವಾಸವಿಟ್ಟು ಜನರು ಕಾಂಗ್ರೆಸ್ ಭವಿಷ್ಯ ಬರೆಯುತ್ತಾರೆ. ಬಿಜೆಪಿಯವರು ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ ಕಾಂಗ್ರೆಸ್ ಐದು ಗ್ಯಾರಂಟಿಯಿಂದ ತಿಂಗಳಿಗೆ ಒಂದು ಕುಟುಂಬಕ್ಕೆ ಐದು ಸಾವಿರ ಹೋಗುತ್ತದೆ. ನಾವು ಜನಸಾಮಾನ್ಯ ಜೀವನ ಉತ್ತಮ ಪಡಿಸಿದ್ದೇವೆ. ಜನರ ಕೈಗೆ ದುಡ್ಡು ಕೊಟ್ಟು ಜೀವನ ಸುಧಾರಣೆ ಮಾಡಿದ್ದೇವೆ. ಬಿಜೆಪಿ ಅಭಿವೃದ್ಧಿ ಕೆಲಸ ಮುಂದಿಟ್ಟು ಚುನಾವಣೆ ಹೋಗಲಿ ನೋಡೋಣ ಎಂದು ಮಧು ಬಂಗಾರಪ್ಪ ಸವಾಲೆಸೆದರು.