ಬ್ರಾಹ್ಮಣ ವಿದ್ಯಾರ್ಥಿಗಳಿಗೆ 1 ಲಕ್ಷದ ವರೆಗೆ ಸಾಂದೀಪನಿ ಶಿಷ್ಯ ವೇತನ-ಸಚಿವ ಕೃಷ್ಣ ಬೈರೇಗೌಡ

ಮಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ಸ್ವಾವಲಂಭಿ ಮತ್ತು ಸಾಂದೀಪನಿ ಶಿಷ್ಯ ವೇತನದ ಯೋಜನೆಗಳ ಉಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದ್ದಾರೆ.

ಇಂದು (ಜ.26) ತಮ್ಮ ಕಛೇರಿಯ ನಿಗಮದ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದಲ್ಲಿ, ಸಾಲದ ಪೈಕಿ ಶೇ. 20 ರಷ್ಟು ಹಣವನ್ನು ಸರಕಾರ “ಸ್ವಾವಲಂಭಿ” ಯೋಜನೆಯಡಿಯಲ್ಲಿ ಸಹಾಯಧನ ನೀಡಲಿದೆ ಎಂದರು. ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಆದಾಯ ಬರುವಂತಹ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು. ʼಜನವರಿ 31 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಅರ್ಹರು ಇದರ ಉಪಯೋಗ ಪಡೆದುಕೊಳ್ಳಿ ಮತ್ತು ಗರಿಷ್ಠ 5 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದುʼ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ಸಾಂದೀಪನಿ ಶಿಷ್ಯ ವೇತನ:

ಮೆಟ್ರಿಕ್ ನಂತರದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 15,000 ರೂ. ವರೆಗೆ “ಸಾಂದೀಪನಿ” ಯೋಜನೆಯಡಿ ಶಿಷ್ಯ ವೇತನ ನೀಡಲಾಗುತ್ತದೆ. ಯುಜಿ/ಪಿಜಿ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ತೇರ್ಗಡೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ದಾಖಲಾತಿ ಶುಲ್ಕದ ಮೊತ್ತದ 2/3 ಭಾಗ ಹಾಗೂ ಗರಿಷ್ಠ ರೂ. 1 ಲಕ್ಷದ ವರೆಗೆ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ಸರಕಾರ ಪಾವತಿಸಲಿದೆ. ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವರಿ.31 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here