ಮಂಗಳೂರು: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಬಿಜೆಪಿ ನೇತೃತ್ವದ ಎನ್.ಡಿಎ ಮೈತ್ರಿಕೂಟ ಸೇರಲಿದ್ದಾರೆ. ಮತ್ತೆ ಏಳನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಇಂಡಿಯಾ ಮೈತ್ರಿಕೂಟದಿಂದ ಜೆ.ಡಿಯು ನಿರ್ಗಮನ ಬಹುತೇಕ ಖಚಿತವಾಗಿದೆ.
ಜ.28ರಂದು ಮತ್ತೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಸುಶೀಲ್ ಮೋದಿ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ. ಪದೇಪದೇ ಮಿತ್ರ ಪಕ್ಷವನ್ನು ಬದಲಾಯಿಸುವ ನಿತೀಶ್ ಕುಮಾರ್, ಬಿಜೆಪಿ ಜೊತೆಗೊಂದಿಷ್ಟು ದಿನ, ಆರ್ ಜೆಡಿ-ಕಾಂಗ್ರೆಸ್ ಜೊತೆಗೆ ಒಂದಿಷ್ಟು ದಿನ ಸರಕಾರ ರಚಿಸುವ ಮೂಲಕ ಮುಖ್ಯಮಂತ್ರಿಯಾಗಿ ಉಳಿದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ ಜೆಡಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೂ ನಿತೀಶ್ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆಯಾಗಿಲ್ಲ.