ಬೆಳ್ತಂಗಡಿ ಸುಡುಮದ್ದು ಸ್ಫೋಟ ಪ್ರಕರಣ-ಮುಂದುವರಿದ ತನಿಖೆ-ಘಟಕದ ಮಾಲೀಕ ಬಶೀರ್‌ ಪೊಲೀಸ್ ವಶಕ್ಕೆ-ಘಟನೆಗೆ ಸಂಬಂಧಿಸಿದಂತೆ ಎಸ್‌ಪಿ ಮಾಹಿತಿ

ಮಂಗಳೂರು: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಗೋಳಿಯಂಗಡಿ ಎಂಬಲ್ಲಿ ಜ.28ರಂದು ಸಂಜೆ ಸುಡುಮದ್ದು ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸುಡುಮದ್ದು ತಯಾರಿಕಾ ಘಟಕದ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ ಬಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸಾಲಿಡ್ ಫಯರ್ ವರ್ಕ್ಸ್ ಎಂಬ ಸುಡುಮದ್ದು ತಯಾರಿಕಾ ಘಟಕದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಂಸ್ಥೆಯ ಮಾಲೀಕ ಸೈಯ್ಯದ್ ಬಶೀರ್​ ಎಂಬವರನ್ನು ವಶಕ್ಕೆ ಪಡೆದಿದ್ದೇವೆ. ನಮಗೆ ದೊರೆತಿರುವ ದಾಖಲೆಗಳ ಪ್ರಕಾರ 2011ರಿಂದ ಪಟಾಕಿ ತಯಾರಿಕೆಗೆ ಪರವಾನಗಿ ಪಡೆದುಕೊಂಡಿದ್ದು, ಅದನ್ನು ಕಂದಾಯ ಇಲಾಖೆ ನೀಡಿದೆ. 2019ರಲ್ಲಿ ಅದನ್ನು ಮತ್ತೆ ನವೀಕರಿಸಿಕೊಂಡಿದ್ದು, 2022ರಲ್ಲಿ ಅದನ್ನು ಅಧಿಕಾರಿಗಳು ದೃಢೀಕರಣ ಕೂಡ ಮಾಡಿಕೊಂಡಿದ್ದಾರೆ. ಈ ಲೈಸೆನ್ಸ್ 2024ರವರೆಗೂ ಊರ್ಜಿತದಲ್ಲಿದೆ ಎಂದು ತಿಳಿಸಿದ್ದಾರೆ.

ಬಶೀರ್​ ತನ್ನದೇ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದರು. ಘಟನೆಯ ವೇಳೆ ಸ್ಥಳದಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಕಾರ್ಮಿಕರನ್ನು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಚೇತನ್(24), ಕೇರಳ ಮೂಲದ ವರ್ಗೀಸ್(60) ಮತ್ತು ಕುಂಞ(60) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಫಾರೆನ್ಸಿಕ್ ತಂಡವನ್ನು ಕರೆಸಲಾಗಿದ್ದು, ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗುವುದು. ಯಾವ ಕಾರಣಕ್ಕೆ ಈ ಸ್ಫೋಟ ಸಂಭವಿಸಿದೆ ಎಂಬುದರ ಬಗ್ಗೆ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಸುಡುಮದ್ದಿಗೆ ಗ್ರಾಹಕರಿಂದ ಬೇಡಿಕೆ ಬಂದಾಗ ಅದನ್ನು ತಯಾರಿಸಿಕೊಡಲಾಗುತ್ತಿತ್ತು. ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಾಗ ಸೈಯದ್ ಬಶೀರ್ ಅವರ ಕುಟುಂಬ ತುಂಬಾ ವರ್ಷದಿಂದ ಇದನ್ನು ಮಾಡಿಕೊಂಡು ಬರುತ್ತಿದೆ. ಅವರಿಂದಾನೇ ಸ್ಥಳೀಯ ಜನರು ತಮ್ಮ ಸಮಾರಂಭಗಳಲ್ಲಿ ಸಿಡಿಸಲು ಇವರಿಂದ ಸಿಡಿಮದ್ದು ಖರೀದಿಸುತ್ತಿದ್ದರು ಎಂದು ಗೊತ್ತಾಗಿದೆ. ಮೈಸೂರಿನ ವ್ಯಕ್ತಿಯೋರ್ವರು ಪಟಾಕಿ ಬೇಕು ಎಂದು ತಿಳಿಸಿದ್ದರಿಂದ ಇಲ್ಲಿನ ಕಾರ್ಮಿಕರು ತಯಾರಿಸುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ. ಸ್ಪೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಎಸ್‌ಪಿ ರಿಷ್ಯಂತ್ ತಿಳಿಸಿದ್ದಾರೆ.

‘ಬಾಂಬ್’ ತಯಾರಿಸುವ ಆರೋಪದ ಬಗ್ಗೆ ಎಸ್‌ಪಿ ಮಾತು

ಬಾಂಬ್ ಸ್ಫೋಟದಂತಹ ಶಬ್ದ ಕೇಳಿಬಂದಿದೆ. ಹಾಗಾಗಿ ಇಲ್ಲಿ ಬಾಂಬ್ ತಯಾರಿಸಲಾಗುತ್ತಿತ್ತು ಎಂಬ ಬಗ್ಗೆ ಸ್ಥಳೀಯರು ಆರೋಪಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, “ಸ್ಥಳೀಯರಲ್ಲಿ ವಿಚಾರಣೆ ನಡೆಸಿದಾಗ ಈ ಭಾಗದಲ್ಲಿ ಕೆಲವೊಂದು ದೊಡ್ಡ ಪಟಾಕಿ ಗರ್ನಲ್ ಬಳಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರಕಿದೆ. ಗರ್ನಲ್ ಗೆ ಅರ್ಧ ಸುಡುಮದ್ದು ಹಾಕಿ, ಅದಕ್ಕೆ ಬತ್ತಿ ಸೇರಿಸಲಾಗುತ್ತಿತ್ತು. ಅದನ್ನು ಇಲ್ಲಿ ತಯಾರು ಮಾಡುತ್ತಿದ್ದರು. ಇದಕ್ಕೆ ಪೂರಕವಾಗಿ ಕೆಲವೊಂದು ಖಾಲಿ ಶೆಲ್‌ಗಳು, ಬತ್ತಿಗಳು ಹಾಗೂ ಈಗಾಗಲೇ ತಯಾರಿಸಿದ್ದ ಸುಡುಮದ್ದುಗಳು ಕೂಡ ಪತ್ತೆಯಾಗಿದೆ. ಈ ದೊಡ್ಡ ಪಟಾಕಿಯನ್ನು ಸ್ಥಳೀಯ ಜಾತ್ರೆ, ಶಿವರಾತ್ರಿ ಹಬ್ಬ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಸಿಡಿಸಲು ಬಳಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಇಂತಹಾ ಪಟಾಕಿ ತಯಾರಿಕಾ ಘಟಕದಲ್ಲಿ ಸುರಕ್ಷಿತೆ ಬಹಳ ಅಗತ್ಯವಾಗಿದ್ದು, ಪರಿಶೀಲನೆ ವೇಳೆ ಸುರಕ್ಷತೆಗೆ ಆದ್ಯತೆ ಕೊಟ್ಟಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ, ಇದೇ ಹಿನ್ನೆಲೆಯಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ ಬಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here