ಮಂಗಳೂರು: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಕ್ರಮವನ್ನು ವಿಹೆಚ್ಪಿ, ಭಜರಂಗದಳ ಖಂಡಿಸುತ್ತದೆ. ಹನುಮ ಧ್ವಜ ಮತ್ತೆ ಹಾರಿಸಬೇಕು. ಇಲ್ಲದಿದ್ದರೆ ಇಡೀ ರಾಮಭಕ್ತರಿಗೆ ಕರೆ ನೀಡುತ್ತೇವೆ. ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ. ರಸ್ತೆ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಈ ಮೂಲಕ ಹನುಮ ಭಕ್ತಿಯನ್ನು ಸರ್ಕಾರಕ್ಕೆ ತೋರಿಸುತ್ತೇವೆ. ಹಿಂದೂ ಸಮಾಜಕ್ಕೆ, ರಾಮ-ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ. ರಾಷ್ಟ್ರ ಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾರಿಸಲು ಅದರದ್ದೇ ಆದ ನೀತಿ ನಿಯಮಗಳಿವೆ. ರಾಷ್ಟ್ರ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿ ಹೆಚ್ ಪಿ ಜಿಲ್ಲಾಧ್ಯಕ್ಷ ಎಚ್ ಕೆ ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.