ಮಂಗಳೂರು(ರಾಂಚಿ): ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ಜೆಎಂಎಂ ಪಕ್ಷದ ಉಪಾಧ್ಯಕ್ಷ ಹಾಗೂ ಸಾರಿಗೆ ಸಚಿವ ಚಂಪೈ ಸೊರೆನ್ ಇಂದು ಪ್ರಮಾಣ ವಚನ ಸ್ವೀಸರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಅವರಿಗೆ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅಧಿಕಾರ ಗೋಪ್ಯತೆ ಮತ್ತು ಪ್ರಮಾಣ ವಚನ ಭೋಧಿಸಿದರು. ಹಣ ಲೇವಾದೇವಿ ಕಾಯ್ದೆಯಡಿ ಮುಖ್ಯಮಂತ್ರಿ ಯಾಗಿದ್ದ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂದಿಸಿದ ಎರಡು ದಿನದ ನಂತರ ನೂತನ ಮುಖ್ಯಮಂತ್ರಿ ಯಾಗಿ ಚಂಪೈ ಸೊರೇನ್ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ನೂತನ ಮುಖ್ಯಮಂತ್ರಿ ಜೊತೆಗೆ ಮಿತ್ರ ಪಕ್ಷ ಕಾಂಗ್ರೆಸ್ ನ ಅಲಂಗೀರ್ ಅಲಂ, ಆರ್ ಜೆಡಿಯ ಸತ್ಯಾನಂದ ಬೋಕ್ತ ಸೇರಿದಂತೆ ಮತ್ತಿತರರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಅವರಿಗೆ ತನ್ನ ಸರ್ಕಾರಕ್ಕೆ ಬಹುಮತ ಇದೆ ಎನ್ನುವುದನ್ನು ಹತ್ತು ದಿನಗಳ ಒಳಗೆ ಸಾಬೀತು ಮಾಡುವಂತೆ ರಾಜ್ಯಪಾಲ ಸಿವಿ ರಾಧಾಕೃಷ್ಣನ್ ಅವರು ಗಡುವು ನೀಡಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ- ಕಾಂಗ್ರೆಸ್, ಆರ್ ಜೆಡಿ ಸೇರಿದಂತೆ 43 ಶಾಸಕರ ಬೆಂಬಲದೊಂದಿಗೆ ಚಂಪೈ ಸೊರೇನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧನವಾಗುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಸಾರಿಗೆ ಸಚಿವರಾಗಿದ್ದ ಚಂಪೈ ಸೊರೇನ್ ಅವರನ್ನು ಶಾಸಕರು ಆಯ್ಕೆ ಮಾಡಿದ್ದರು
ಹೇಮಂತ್ ಸೊರೆನ್ ರಾಜೀನಾಮೆಯಿಂದ ಮುಖ್ಯಮಂತ್ರಿಗಳಿಲ್ಲದ ರಾಜ್ಯ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ರಾಧಾಕೃಷ್ಣನ್ ಅವರಿಗೆ ಮನವಿ ಮಾಡಿ ಶೀಘ್ರ ಮುಖ್ಯಮಂತ್ರಿಗಳ ಪ್ರಮಾಣ ವಚನಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ಮಾಜಿ ಸಚಿವ ಬನ್ನಾ ಗುಪ್ತಾ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ.ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಗೆ ಬಿಜೆಪಿ ಕಾರಣ ಎಂದು ದೂರಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿಯಾಗಿ ಚಂಪೈ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಜೆಎಂಎಂ,ಕಾಂಗ್ರೆಸ್ ಮತ್ತು ಆರ್ ಜೆಡಿ ಶಾಸಕರು ಹೈದರಾಬಾದ್ ನತ್ತ ಪ್ರಯಾಣ ಬೆಳಸಿದರು. ಮುಖ್ಯಮಂತ್ರಿ ಚಂಪೈ ಸೊರೇನ್ ಬಹುಮತ ಸಾಬೀತು ಮಾಡುವ ದಿನ ಆಗಮಿಸುತ್ತೇವೆ. ಕುದುರೆ ವ್ಯಾಪಾರ ತಡೆಯಲು ಈ ಕ್ರಮ ಎಂದು ಮೈತ್ರಿಕೂಟದ ಶಾಸಕರು ಹೇಳಿದ್ದಾರೆ.