ಮಂಗಳೂರು: ಅದ್ಯಾವ ಕೆಲಸವೋ, ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮಾನಾಸ್ಪದ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕರ ತಂಡವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಅಕ್ರಮ ಸಿಮ್ಗಳ ಸಾಗಾಟ ವಿಚಾರ ಬೆಳಕಿಗೆ ಬಂದಿದೆ.
ಐದು ಜನರ ಯುವಕ ತಂಡ 42 ಅಕ್ರಮ ಸಿಮ್ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಫೆ.1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್ಗಳನ್ನು ಜಪ್ತಿ ಮಾಡಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕ ಸೇರಿದಂತೆ ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಗಳು. ಆರೋಪಿ ಅಕ್ಬರ್ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಆರೋಪಿಗಳು ಸಾಗಿಸುತ್ತಿದ್ದ ಸಿಮ್ಗಳು ಬೆಂಗಳೂರಿನಲ್ಲಿರುವ ಆಗಂತುಕರ ಕೈ ಸೇರುತ್ತಿತ್ತಾ? ಎನ್ನುವ ಶಂಕೆ ವ್ಯಕ್ತವಾಗಿದೆ. ಅಕ್ಬರ್ ಆಲಿ ಮೊದಲಿನಿಂದಲೂ ದುಬೈನಲ್ಲಿ ಇದ್ದುಕೊಂಡೇ ಸಿಮ್ ಕಾರ್ಡ್ ಗಳನ್ನು ತನ್ನ ಸ್ನೇಹಿತ ಮೊಹಮ್ಮದ್ ಮುಸ್ತಫಾ ಎಂಬಾತನ ಮೂಲಕ ಕಲೆಕ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಮೊಹಮ್ಮದ್ ಮುಸ್ತಫಾ ತನ್ನ ಸ್ನೇಹಿತರಾಗಿರುವ ರಮೀಝ್ ಮತ್ತು ಮಹಮ್ಮದ್ ಸಾಧಿಕ್ಗೆ ಸಿಮ್ಗಳ ವ್ಯವಸ್ಥೆಗೆ ಸೂಚನೆ ನೀಡುತ್ತಿದ್ದನು. ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟನ್ನು ತಮ್ಮ ಆತ್ಮೀಯರಿಂದ ಕಮಿಷನ್ ಕೊಡಿಸಿ ಕಲೆಕ್ಟ್ ಮಾಡಿ ಮುಸ್ತಫಾನಿಗೆ ನೀಡುತ್ತಿದ್ದರು. ನಂತರ ಅಕ್ಬರ್ ಅಲಿ ಹೇಳಿದಂತೆ ಸಿಮ್ ಕಾರ್ಡ್ ಮಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.