ಮಂಗಳೂರು: ಗೂಡ್ಸ್ ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಉದ್ದದ ವಸ್ತು, ಸಲಕರಣೆಗಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಕಳೆದ ನಾಲ್ಕು ವರ್ಷಗಳಲ್ಲಿ 4,541 ಪ್ರಕರಣಗಳನ್ನು ದಾಖಲಿಸಿದ್ದು, 22,71,350 ರೂ. ದಂಡ ಸಂಗ್ರಹಿಸಿದ್ದಾರೆ.
ನಗರದ ವಿವಿಧ ಟೆಂಪೋ ರಿಕ್ಷಾ, ಪಿಕಪ್ ವಾಹನ, ಮಿನಿ ಟೆಂಪೋಗಳಲ್ಲಿ ನಿಗದಿತ ಪ್ರಮಾಣಕ್ಕೆ ಹೆಚ್ಚು ಉದ್ದವಾಗಿರುವ ಪೈಪ್, ಕಬ್ಬಿಣದ ಸರಳು, ಅಲ್ಯೂಮಿನಿಯಂ ರಾಡ್ಗಳು, ಮರ ಇತ್ಯಾದಿಗಳನ್ನು ಸಾಗಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಇದು ವಾಹನದಿಂದ ಹೊರಬಿದ್ದು ಇತರ ವಾಹನಗಳಲ್ಲಿ ಸಂಚರಿಸುವರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಘಟನೆಗಳೂ ಸಂಭವಿಸಿವೆ. 2024ರ ಕಳೆದ ಒಂದು ತಿಂಗಳಲ್ಲಿ ಕಮಿಷನರೆಟ್ ವ್ಯಾಪ್ತಿಯಲ್ಲಿ 269 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1,34,500 ರೂ. ದಂಡ ವಿಧಿಸಲಾಗಿದೆ. 2021ರಲ್ಲಿ 974 ಪ್ರಕರಣದಲ್ಲಿ 5,07,500 ರೂ., 2022ರಲ್ಲಿ 1,311 ಪ್ರಕರಣಗಳಲ್ಲಿ 6,54,500 ರೂ ದಂಡ, 2023ರಲ್ಲಿ 1987 ಪ್ರಕರಣಗಳಲ್ಲಿ 9,74,850 ರೂ. ದಂಡ ಸಂಗ್ರಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.