ತುಮಕೂರು ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ-1 ತಿಂಗಳ ಹಸುಗೂಸು, ಬಾಣಂತಿಯನ್ನು ಊರಾಚೆ ಇರಿಸಿದ ಗ್ರಾಮಸ್ಥರು

ಮಂಗಳೂರು(ತುಮಕೂರು): ತುಮಕೂರು ಜಿಲ್ಲೆಯಲ್ಲಿ ಮೌಢ್ಯಾಚರಣೆ ಮುಂದುವರೆದಿದೆ. ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮಸ್ಥರು ಊರಾಚೆ ಇರಿಸಿದ್ದಾರೆ. ಹೆರಿಗೆ ಬಳಿಕ 25 ವರ್ಷದ ಬಾಣಂತಿ ಬಾಲಮ್ಮ ಹಾಗೂ ಒಂದು ತಿಂಗಳ ಮಗುವನ್ನ ಗ್ರಾಮದ ಹೊರಗಿನ ಗುಡಿಸಲಿನಲ್ಲಿರಿಸಿದ್ದಾರೆ. ದೂರನ್ನು ಆಧರಿಸಿ ಗ್ರಾಮಕ್ಕೆ ಭೇಟಿ ನೀಡಿದ ಶಿರಾ ಜೆಎಮ್​​ಎಫ್​ಸಿ ನ್ಯಾಯಾಧೀಶೆ ಗೀತಾಂಜಲಿ ಪರಿಶೀಲನೆ ನಡೆಸಿ ಗ್ರಾಮದಲ್ಲಿ ಮೌಡ್ಯದ ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ವಾಪಸ್ ಮನೆಗೆ ಸೇರಿಸಿರುವ ಅವರು ಮತ್ತೆ ಘಟನೆ ಮರುಕಳಿಸಿದರೇ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ಮೌಢ್ಯಕ್ಕೆ 1 ತಿಂಗಳ ಮಗು ಬಲಿಯಾಗಿತ್ತು. ದೇವರಿಗೆ ಸೂತಕ ಆಗುತ್ತೆ ಎಂದು ಬಾಣಂತಿ, ಮಗುವನ್ನು ಊರಿನ ಹೊರಗೆ ಗುಡಿಸಲಲ್ಲಿಡಲಾಗಿತ್ತು. ಮಗುವಿಗೆ ವಿಪರೀತ ಶೀತವಾಗಿದ್ದು ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿತ್ತು. ಕುಟುಂಬಸ್ಥರ ಮೂಢನಂಬಿಕೆಗೆ 1 ತಿಂಗಳ ಕಂದಮ್ಮ ಸಾವನ್ನಪ್ಪಿತ್ತು. ಸಂಪ್ರದಾಯದ ಹೆಸರಿನಲ್ಲಿ ತಾಯಿ, ಮಗುವಿನ ಜೀವಕ್ಕೆ ಕುತ್ತು ತರುವಂತ ಮೌಡ್ಯಾಚರಣೆಯಲ್ಲಿ ಪುಟ್ಟ ಕಂದಮ್ಮ ಪ್ರಾಣ ಕಳೆದುಕೊಂಡಿದ್ದರೆ ತಾಯಿ ಒಡಲ ಆಕ್ರಂದನ ಮುಗಿಲು ಮುಟ್ಟಿತ್ತು.  ಈಗ ಮತ್ತೆ ಗೊಲ್ಲ‌ ಸಮುದಾಯದಲ್ಲಿ ಈ ಮೌಢ್ಯಾಚರಣೆ ಕಂಡುಬಂದಿದ್ದು, ಗ್ರಾಮದ ಅಂಗನವಾಡಿ ಶಿಕ್ಷಕಿ ಸುಜಾತ ಹಾಗೂ ಬಿಸಿಯೂಟದ ಕಾರ್ಯಕರ್ತೆ ಸಾವಿತ್ರಮ್ಮ ಜೊತೆಗೆ ಓರ್ವ ಮಹಿಳೆಯನ್ನು ಗ್ರಾಮದಿಂದ ಹೊರಗಿಡಲಾಗಿತ್ತು. ಚಿಕ್ಕನೆಟ್ಟಗುಂಟೆ ಗ್ರಾಮದಲ್ಲಿ ಋತುಚಕ್ರವಾದ ಮಹಿಳೆಯರನ್ನು ಮೂರು ದಿನಗಳ ಕಾಲ ಊರಿನಿಂದ ಹೊರಗಿಡುವ ಸಂಪ್ರದಾಯ ಈಗಲೂ ಜಾರಿಯಲ್ಲಿದೆ.

LEAVE A REPLY

Please enter your comment!
Please enter your name here