ಮಂಗಳೂರು(ಬೆಂಗಳೂರು): ದಿನನಿತ್ಯ ಬಳಕೆಮಾಡುವ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು, ಆ ಪಟ್ಟಿಗೆ ಈಗ ಬೆಳ್ಳುಳ್ಳಿ ಸೇರ್ಪಡೆಯಾಗಿದೆ.
ಸಾಮಾನ್ಯ ಜನರ ಊಟದ ತಟ್ಟೆ ಹಣದುಬ್ಬರಕ್ಕೆ ಬಲಿಯಾಗಿದೆ. ಕೆಲವು ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕದ ಗಡಿ ದಾಟಿದ್ದರೆ, ಅಕ್ಕಿ ಬೆಲೆಯಲ್ಲಿಯೂ ವಿಪರೀತ ಏರಿಕೆಕಂಡಿದೆ. ಈಗ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 500 ರೂ.ಗೆ ತಲುಪಿದೆ. ಸಾಮಾನ್ಯವಾಗಿ ಕೆ.ಜಿ.ಗೆ 150 ರಿಂದ 200 ರೂ.ಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದ್ದು, ಒಗ್ಗರಣೆ ರುಚಿ ಕಳೆದುಕೊಳ್ಳುತ್ತಿದೆ. ಬೆಳ್ಳುಳ್ಳಿ ಬೆಲೆ ದಿನೇ ದಿನೇ ಹೊಸ ದಾಖಲೆ ಸೃಷ್ಟಿಸುತ್ತಿರುವ ಕಾರಣ ಈಗ ಜನರು ಬೆಳ್ಳುಳ್ಳಿ ಖರೀದಿಯಿಂದ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತಲೆಗಿಂತ ದೊಡ್ಡ ಮುಂಡಾಸು ಎನ್ನುವಂತೆ ಚಿಕನ್‌ಗಿಂತ ಬೆಳ್ಳುಳ್ಳಿ ಬೆಲೆ ದುಬಾರಿಯಾಗಿದೆ ಎಂದು ಜನ ಹೇಳುವಂತಾಗಿದೆ. ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಕೆಜಿಗೆ 600 ರೂ.ಗೆ ಮಾರಾಟವಾಗುತ್ತಿದೆ.