ಮಂಗಳೂರು(ಕಲಬುರಗಿ): ಬೇಸಿಗೆ ಆರಂಭದಲ್ಲೇ ದೇಶದ ಇತರ ಭಾಗಗಳೊಂದಿಗೆ ದಕ್ಷಿಣ ಭಾರತದಲ್ಲಿ ತಾಪಮಾನ ಗಗನಕ್ಕೇರುತ್ತಿದೆ. ಭಾನುವಾರ ಕರ್ನಾಟಕದ ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮಾಹಿತಿ ನೀಡಿದ ಕಲಬುರಗಿ ಜಿಲ್ಲಾ ವಿಪತ್ತು ವೃತ್ತಿಪರ ಉಪ ಆಯುಕ್ತ ಉಮೇಶ್, ಮಾ.31 ರಂದು ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಸುಡುವ ಬಿಸಿಲಿಗೆ ಬೆದರಿ ಜನರು ಮನೆಯಿಂದ ಹೊರಗೆ ಬರುವುದಕ್ಕೆ ಹೆದರುತ್ತಿದ್ದಾರೆ. ಹೆಚ್ಚಾಗಿರುವ ಬಿಸಿಲಿನ ತಾಪದ ಕುರಿತು ಜನರಿಗೆ ಎಚ್ಚರವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಲಬುರಗಿಯಲ್ಲಿ ಉರಿ ಬಿಸಿಲಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಅನುಮಾನ ಮೂಡಿದೆ. ನರೇಗಾ ಕೂಲಿ ಕೆಲಸ ಮಾಡುವಾಗ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದು, ಬಿಸಿಲಿನ ತಾಪದಿಂದ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರುವ ಕುರಿತು ಮೃತ ವ್ಯಕ್ತಿಯ ಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಶರಣಪ್ಪ ಸಮಗಾರ (42) ಎಂಬುವರು ನರೇಗಾ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಿಸಿಲಿನ ಹೊಡೆತಕ್ಕೆ ಶರಣಪ್ಪನ ಮೃತಪಟ್ಟಿದ್ದಾರಾ? ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರಾ? ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಶರಣಪ್ಪ ಸಮಗಾರ ಮರಣೋತ್ತರ ಪರೀಕ್ಷೆ ವರದಿ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ. ಈ ಸಂಬಂಧ ಕಲಬುರಗಿ ಜಿಲ್ಲೆಯ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.