ಮಂಗಳೂರು(ಬೆಂಗಳೂರು): ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಎಐಸಿಸಿ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಿದೆ. ಲೋಕಸಭೆ ಚುನಾವಣೆಯಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿರುವ ಕೆಪಿಸಿಸಿ ಜಿಲ್ಲಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿಗಳನ್ನು ಬದಲಾವಣೆ ಮಾಡಲಾಗಿದ್ದು, ಬಿ.ಎಲ್.ಶಂಕರ್, ವಿ.ಎಸ್.ಉಗ್ರಪ್ಪ, ಆನಂದ್ ನ್ಯಾಮಗೌಡ, ಎಂ.ಸಿ.ವೇಣುಗೋಪಾಲ್, ಪಿ.ಆರ್.ರಮೇಶ್, ಹೆಚ್. ಆಂಜನೇಯ, ರಮಾನಾಥ ರೈ, ಐವಾನ್ ಡಿಸೋಜಾ ಸೇರಿದಂತೆ ಒಟ್ಟು 43 ನೂತನ ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಜೊತೆಗೆ 138 ಪ್ರಧಾನ ಕಾರ್ಯದರ್ಶಿಗಳನ್ನು ನೆಮೀಸಲಾಗಿದ್ದು, ವಿನಯ್ ಕಾರ್ತಿಕ್ ರನ್ನು ಖಜಾಂಚಿಯಾಗಿ ನೇಮಿಸಿದೆ.
ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷರನ್ನಾಗಿ ರಮೇಶ್ ಬಾಬುರನ್ನು ನೇಮಿಸಲಾಗಿದೆ. ಸಹ ಅಧ್ಯಕ್ಷರನ್ನಾಗಿ ಐಶ್ವರ್ಯ ಮಹದೇವ್ ಹಾಗೂ ಉಪಾಧ್ಯಕ್ಷರಾಗಿ ಸತ್ಯಪ್ರಕಾಶ್ ಅವರನ್ನು ನೇಮಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಜಿಲ್ಲಾ/ನಗರ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ನೇಮಕದ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ತಕ್ಷಣವೇ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ. ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಬಳ್ಳಾರಿ ನಗರ – ಪ್ರಶಾಂತ್ ಅಲ್ಲಂ ವೀರಭದ್ರಪ್ಪ, ಬೆಂಗಳೂರು ಪೂರ್ವ – ಕೆ ನಂದಕುಮಾರ್, ಹಾವೇರಿ – ಸಂಜೀವಕುಮಾರ ನೇರಲಗಿ, ಕೊಪ್ಪಳ – ಅಮರೇಗೌಡ ಬಯ್ಯಾಪುರ, ಉಡುಪಿ – ಕಿಶನ್ ಹೆಗ್ಡೆ, ರಾಯಚೂರು – ಬಸವರಾಜ ಇಟಗಿ, ಶಿವಮೊಗ್ಗ – ಆರ್ ಪ್ರಸನ್ನ ಕುಮಾರ್ ಅವರನ್ನು ನೂತನ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ.