ಮಂಗಳೂರು(ಹಾಸನ): ‘ಈವರೆಗೂ ನಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಯಾರು ಏನೇ ಕುತಂತ್ರ ಮಾಡಿದರೂ, ಏನೇ ಹೋರಾಟ ಮಾಡಿದರೂ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ” ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ಕಟ್ಟಾಯದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 1991ರಲ್ಲಿ ಲೋಕಸಭೆಗೆ ನಿಂತಾಗ ಎಲ್ಲಾ ಕಡೆ ದೇವೇಗೌಡರು ಸೋಲುತ್ತಾರೆ ಎಂಬ ಮಾತುಗಳು ಬಂದಾಗ ಜಿಲ್ಲೆಯ ಜನರು ನನಗೆ 33 ಸಾವಿರ ಮತಗಳ ಲೀಡ್ ಕೊಟ್ಟು ಗೆಲ್ಲಿಸಿದ್ದು ನಾನು ಎಂದಿಗೂ ಮರೆಯುವುದಿಲ್ಲ. ಕಟ್ಟಾಯ ಹೋಬಳಿ ಒಂದರಲ್ಲೇ 15 ಸಾವಿರ ಲೀಡ್ ಕೊಟ್ಟ ಹಿನ್ನೆಲೆಯಲ್ಲಿ ಲೋಕಸಭೆಗೆ ಹೋಗಿ ಪ್ರಧಾನಿ ಆಗಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದ ಎಚ್. ಡಿ. ದೇವೇಗೌಡ, ಜಿಲ್ಲೆಯಲ್ಲಿ ಕೆಲವರು ಭಾಷಣ ಮಾಡಿದ್ದಾರೆ. ಅವರ ಹೆಸರು ನಾನು ಹೇಳುವುದಿಲ್ಲ. ಸೋತಿದ್ದವರನ್ನು ಗಂಡಸಿ ಕ್ಷೇತ್ರದಲ್ಲಿ ಬೆಳೆಸಿದ್ದು ರೇವಣ್ಣ. ಇನ್ನೊಬ್ಬರನ್ನು ರಾಜ್ಯಸಭೆ ಮೇಂಬರ್ ಮಾಡಿದೆ. ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಶಾಸಕ ಶಿವಲಿಂಗೇಗೌಡ ಹಾಗೂ ಎಚ್. ಕೆ ಜವರೇಗೌಡ ವಿರುದ್ಧ ಕಿಡಿಕಾರಿದ್ದಾರೆ.
ತಾನು ಪ್ರಧಾನಿ ಆಗಿದ್ದ ವೇಳೆ ಕಟ್ಟಾಯ ಭಾಗದ ಜನರ ಅನುಕೂಲಕ್ಕೆ ಯಗಚಿ ಜಲಾಶಯ ನಿರ್ಮಾಣ ಮಾಡಿದೆ. ಹಾಸನ ಜಿಲ್ಲೆಯ ಸುಮಾರು 45 ಸಾವಿರ ಎಕರೆ ಜಮೀನಿಗೆ ಅನುಕೂಲ ಆಗಬೇಕಿದ್ದ ನೀರನ್ನು ಚಿಕ್ಕಮಗಳೂರಿಗೆ ಕೊಂಡೊಯ್ಯುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಅನಾನುಕೂಲ ಆಯಿತು. ಈ ಭಾಗಕ್ಕೆ ಕಾರ್ಖಾನೆ ತರಬೇಕು ಎಂದು ಇಲ್ಲಿಯ ಕೆಲವರು ಸಲಹೆ ನೀಡಿದ್ದಾರೆ. ಇನ್ನೂ ಎರಡೂವರೆ ವರ್ಷ ರಾಜ್ಯಸಭೆ ಸದಸ್ಯ ಆಗಿರುತ್ತೇನೆ. ನನ್ನ ಅವಧಿಯ ಒಳಗೆ ಈ ಭಾಗದಲ್ಲಿ ಕಾರ್ಖಾನೆ ಸ್ಥಾಪಿಸಿ ಸ್ಥಳೀಯರಿಗೆ ನೆರವು ನೀಡುತ್ತೇನೆ. ಕಾವೇರಿ ನೀರಿಗಾಗಿ ಹೋರಾಡಿದ್ದೇನೆ. ಹೇಮಾವತಿ ನೀರನ್ನು ನಾವು ಬಳಸಬಾರದು ಅಂತ ಆದೇಶ ಮಾಡ್ತಾರೆ. ರಾಜ್ಯದಲ್ಲಿ ಅಧಿಕಾರದ ದರ್ಪ ಮಿತಿಮೀರಿದೆ. ಮೂರು ಸಲ ಬಂದು ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸ್ತಿನಿ ಎಂದು ಸಿ. ಎಂ ಹೇಳಿದ್ದಾರೆ. ಆದರೆ, 1991ರಲ್ಲಿ ಹೇಗೆ ನನ್ನನ್ನು ಗೆಲ್ಲಿಸಿದ್ದಿರೋ ಅದೇ ರೀತಿ ಈಗ ಪ್ರಜ್ವಲ್ ಕೈ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.