ಮಂಗಳೂರು(ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ಹೋಟೆಲ್ವೊಂದರಲ್ಲಿ ಕೇರಳದ ದಂಪತಿ ಹಾಗೂ ಅವರ ಸ್ನೇಹಿತೆ ಸೇರಿ ಮೂವರ ಶವ ಪತ್ತೆಯಾಗಿದೆ.
ಮೃತರನ್ನು ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯರಾದ ನವೀನ್ ಥಾಮಸ್, ಅವರ ಪತ್ನಿ ದೇವಿ ಬಿ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯನ್ನು ತಿರುವನಂತಪುರಂ ನಿವಾಸಿ, ಶಾಲಾ ಶಿಕ್ಷಕಿ ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ. ಈ ಸಂಬಂಧ ಕೇರಳ ಪೊಲೀಸರು ಏ.2 ರಂದು ತನಿಖೆಗೆ ಅರುಣಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಮಾರ್ಚ್ 28 ರಂದು ಈ ಮೂವರು ಹೊಟೇಲ್ ಗೆ ಚೆಕ್ ಇನ್ ಆಗಿದ್ದರು. ಚೆಕ್ ಇನ್ ಆದಾಗಿನಿಂದ ಕೋಣೆಯ ಹೊರಗೆ ಬಾರದಿರುವ ಕಾರಣಕ್ಕೆ ಸಿಬ್ಬಂದಿ ಏ.1 ರಂದು ಅವರ ರೂಮ್ ನತ್ತ ಹೋಗಿದ್ದು, ಅಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ.
ಆರ್ಯ ಬಿ ನಾಯರ್ ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಮಣಿಕಟ್ಟಿಗೆ ಗಾಯವಾಗಿದೆ. ದೇವಿ ಅವರ ಕುತ್ತಿಗೆ ಮತ್ತು ಮಣಿಕಟ್ಟಿಗೆ ತೀವ್ರ ಗಾಯಗಳಾಗಿದ್ದು, ಅವರು ನೆಲದ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನವೀನ್ ಥಾಮಸ್ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಮಣಿಕಟ್ಟಿನ ಮೇಲೆ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜಿಲ್ಲಾ ಪೊಲೀಸ್ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳಕ್ಕೆ ತೆರಳಿ, ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ತನಿಖೆ ಆರಂಭಿಸಿದ್ದಾರೆ. ವಿವಾಹಿತ ದಂಪತಿ ಮತ್ತು ಮಹಿಳೆಯ ಮೂವರ ನಡವಳಿಕೆಯಲ್ಲಿ ಅಸಹಜತೆ ಇದೆ ಎಂದು ತೋರುತ್ತಿದೆ ಆದರೆ ಅವರ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುವವರೆಗೆ ಯಾವುದನ್ನೂ ನಿರ್ಣಾಯಕವಾಗಿ ಹೇಳಲಾಗುವುದಿಲ್ಲ ಎಂದು ತಿರುವನಂತಪುರಂ ನಗರ ಪೊಲೀಸ್ ಕಮಿಷನರ್ ಸಿ ನಾಗರಾಜು ಹೇಳಿದ್ದಾರೆ.
ಇದರ ಹಿಂದೆ ಮಾಟಮಂತ್ರ ಇದೆ ಎಂದು ಹೇಳಲಾಗುತ್ತಿದ್ದು, ಆದರೆ ಪೊಲೀಸರು ಸಾಕ್ಷ್ಯವನ್ನೆಲ್ಲಾ ತರಿಸಿಕೊಂಡು ನೋಡಿದ ಮೇಲೆಯೇ ತನಿಖೆಯ ಬಳಿಕವಷ್ಟೇ ಅವರು, ಯಾಕೆ ಹೊಟೇಲ್‌ಗೆ ಹೋದರು, ಇದಕ್ಕೆ ಕಾರಣವೇನು, ಹೇಗೆ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಹೇಳಲು ಸಾಧ್ಯವೆಂದು ಪೊಲೀಸರು ಹೇಳಿದ್ದಾರೆ. ದಂಪತಿಗೆ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಆಗಾಗ ತಂದೆ-ತಾಯಿಯನ್ನು ಭೇಟಿ ಮಾಡಲು ಬರುತ್ತಿದ್ದರು ಎಂದು ವರದಿ ತಿಳಿಸಿದೆ. ಆರ್ಯ ಅವರ ಸಂಬಂಧಿಕರು ತಿರುವನಂತಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆ ಬಳಿಕ ಕೇರಳದ ಪೊಲೀಸರು ನವೀನ್ ಮತ್ತು ದೇವಿಯೊಂದಿಗೆ ಆರ್ಯ ಅರುಣಾಚಲ ಪ್ರದೇಶಕ್ಕೆ ಹೋಗುವ ಮೊದಲು ಗುವಾಹಟಿಗೆ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.